ಪುಟ:ಹಳ್ಳಿಯ ಚಿತ್ರಗಳು.djvu/೧೪೪

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೧೩೦
ಹಳ್ಳಿಯ ಚಿತ್ರಗಳು

ನಾನೂ ಭಟ್ಟನೂ ಹಾಸನಕ್ಕೆ ಹೋಗಿ ಹಿಂದಿರುಗುವಾಗ ಹೊಸೂರಿನ ಬಳಿಗೆ ಬರುವ ವೇಳೆಗೆ ಸ್ವಲ್ಪ ಕತ್ತಲೆಯಾಯಿತು. ಭಟ್ಟನು ತಾನೇ ಬಸ್ಸನ್ನು ನಡೆಸುವುದಾಗಿ ಡ್ರೈವರಿಗೆ ಹೇಳಿ ಮುಂದುಗಡೆ ಬಂದು ಕುಳಿತನು. ನನಗಂತೂ ಜೀವದಲ್ಲಿ ಜೀವವಿಲ್ಲದಂತಾಯಿತು. ಬದುಕಿ ಬಸ್ಸಿನಿಂದ ಕೆಳಕ್ಕೆ ಇಳಿದ ಕಾಲಕ್ಕೆ ನೋಡೋಣ ಎಂದುಕೊಂಡೆ. ಭಟ್ಟನು ಪದೇ ಪದೇ ನನ್ನ ಕಡೆಗೆ ತಿರುಗಿ ಬಸ್ಸನ್ನು ಹೀಗೆ ನಡೆಸಬೇಕು ಹಾಗೆ ನಡೆಸಬೇಕು ಎಂದು ಹೇಳುತ್ತಿದ್ದನು. ಅವನ ಮಾತಿನ ಕಡೆಗೆ ನನ್ನ ಮನಸ್ಸಿರಲಿಲ್ಲ. ಹೇಗಾದರೂ ಮಾಡಿ ಬಸ್ಸಿನಿಂದ ಇಳಿದರೆ ಸಾಕು ಎಂದು ನಾನು ಯೋಚಿಸುತ್ತಲಿದ್ದೆ. ಎದುರಿಗೆ ಮುನಿಸಿಪಾಲಿಟಿಯ ದೀಪದ ಕಂಬವು ಮಂಕಾಗಿ ಉರಿಯುತ್ತಿತ್ತು. ಭಟ್ಟನಿಗೆ ಬಸ್ಸು ನಡೆಸುವಾಗ ಉಂಟಾದ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಅವನು ಮನಸ್ಸಿಗೆ ಬಂದ ಹಾಡುಗಳನ್ನು ಹಾಡುತ್ತಾ ಬಸ್ಸನ್ನು ದೀಪದ ಕಂಬಕ್ಕೆ ಹೊಡಿಸಿಬಿಟ್ಟನು. ಅದು ಕೆಳಕ್ಕೆ ಉರುಳಿಹೋಯಿತು. ಅದರ ತುದಿಯ ಗಾಜೂ ದೀಪವೂ ಚಿಮಣಿಯ ಪುಡಿಪುಡಿಯಾದುವು. ಪೋಲೀಸಿನವನು ಬಂದು ಭಟ್ಟನ ಲೈಸನ್ಸನ್ನು ಕೇಳಿದನು. ಭಟ್ಟನಿಗೆ ಲೈಸನ್ಸ್ ಇರಲಿಲ್ಲ. ಬಸ್ಸನ್ನು ಮುಂದಕ್ಕೆ ನಡೆಸಕೂಡದೆಂದು ಕಟ್ಟಾಜ್ಞೆಯಾಯಿತು. ನನಗೇನೋ ಅಷ್ಟೇ ಬೇಕಾಗಿತ್ತು. ಆದರೆ ಭಟ್ಟನಿಗೆ ಮಾತ್ರ ತನ್ನ ಪ್ರಥಮ ಪ್ರಯತ್ನಕ್ಕೆ ಉಂಟಾದ ಈ ವಿಘ್ನದಿಂದ ಸಂತೋಷವಾಗಲಿಲ್ಲ.

ಮರುದಿವಸ ಲೈಸನ್ಸ್ ಇಲ್ಲದೆ ಬಸ್ ನಡೆಸಿದನೆಂಬ ಆಪಾದನೆಯ ಮೇಲೆ ನ್ಯಾಯಸ್ಥಾನದಲ್ಲಿ ವಿಚಾರಣೆಯಾಗಿ ಭಟ್ಟನಿಗೆ ೫೦ ರೂಪಾಯಿಗಳು ದಂಡ ಬಿದ್ದಿತು. ಹೊಸೂರಿನ ಮುನಿಸಿಪಾಲಿಟಿಯವರು ಕಂಬದ ವೆಚ್ಚಕ್ಕಾಗಿ ಅವನಿಂದ ೩೫ ರೂಪಾಯಿಗಳನ್ನು ವಸೂಲ್ಮಾಡಿಕೊಂಡರು.

ನಮ್ಮೂರ ಬಸ್ಸಿಗೆ ಈಗಲೂ ಭಟ್ಟನೇ ಏಜೆಂಟು. ಆದರೆ ಇನ್ನೂ ಭಟ್ಟನ ಬಸ್ ಸರ್ವಿಸ್ ಮೈಸೂರು ಸೀಮೆಯಲ್ಲಿ ಹರಡಲಿಲ್ಲ. ಯಾವತ್ತು ಹರಡುತ್ತೋ ಎಂದು ಗಾಬರಿಯಾಗಿದೆ.