ಪುಟ:ಹಳ್ಳಿಯ ಚಿತ್ರಗಳು.djvu/೧೪೯

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೧೩೫
ಒಲುಮೆಯ ಒರೆಗಲ್ಲು

ನಿನಗೆ ಒಂದು ವೀರಶೈವರ ಹೆಣ್ಣನ್ನು ಮದುವೆಮಾಡಿಸಿಬಿಡುತ್ತೇನೆ. ಇಂಟರ್ ಮ್ಯಾರೇಜ್ ಮೇಲುಪಙ್ಕ್ತಿ ಹಾಕಿಬಿಡೋಣ” ಎಂದನು. ಆಗಲಿ ಎಂದೆ.

ಅವನೊಂದಿಗೆ ನಾನು ಮಾಡುತ್ತಿದ್ದ ಹುಡುಗಾಟವನ್ನು ನೆನೆಸಿಕೊಂಡರೆ ಈಗಲೂ ನಗು ಬರುತ್ತದೆ. ಅವನ ಸಹನೆಯನ್ನು ನೆನೆಸಿಕೊಂಡರೆ ಮಿತಿಯಿಲ್ಲದ ದುಃಖವುಂಟಾಗುತ್ತದೆ. ಅವನನ್ನು ಒಂದು ಸಲ ನಮ್ಮ ಹಳ್ಳಿಗೆ ಕರೆದುಕೊಂಡು ಹೋದೆ. ಮನೆಯಲ್ಲಿ ವೀರಶೈವನೆಂದು ಹೇಳಲಿಲ್ಲ. ಸ್ಮಾರ್ತ ಬ್ರಾಹ್ಮಣನೆಂದೆ. ಅಲ್ಲದೆ ಅವನೇನು ಕೋಣೆಗೆ ಹೋಗಿ ಪಾತ್ರೆ ಪದಾರ್ಥ ಮುಟ್ಟಬೇಕೆ? ಒಂದು ದಿವಸ ನದಿಗೆ ಸ್ನಾನ ಮಾಡುವುದಕ್ಕೆ ಹೋದೆವು. ನದಿಯಲ್ಲಿ ಮತ್ತಾರೂ ಇರಲಿಲ್ಲ. ನಾನು ವಿನೋದಕ್ಕಾಗಿ ಅವನ ಬಟ್ಟೆಗಳನ್ನೆಲ್ಲಾ ನೀರಿನಲ್ಲಿ ನೆನೆಸಿಬಿಟ್ಟೆ, ಪುಣ್ಯಾತ್ಮ ಒಂದು ಮಾತನ್ನೂ ಕೂಡ ಆಡಲಿಲ್ಲ. ಎಲ್ಲವನ್ನೂ ನದಿಯ ತೀರದಲ್ಲಿ ಹರಡಿ, ಸ್ವಸ್ಥವಾಗಿ ಬಿಸಿಲು ಕಾಸುತ್ತ ಕುಳಿತುಬಿಟ್ಟ. ಮತ್ತೊಂದು ಸಲ 'ಸ್ಕೌಟ್ ಕ್ಯಾಂಪ್' ಹೋಗಿದ್ದೆವು. ರಾತ್ರಿ ಎಲ್ಲರೂ ಒಟ್ಟಿಗೆ ಬಯಲಿನಲ್ಲಿ ಮಲಗಿದ್ದೆವು. ಅವನಿಗೆ ನಿದ್ರೆ ಹೆಚ್ಚು. ಗೊರಕೆ ಹೊಡೆಯುತ್ತಿದ್ದ. ನನ್ನ ಜೇಬಿನಲ್ಲಿ ಸೂಜಿ ದಾರ ಇದ್ದಿತು. ಕತ್ತಿನ ಬಳಿ ಮಾತ್ರ ಬಿಟ್ಟು ಉಳಿದ ಕಡೆ ಸುತ್ತಾ ಅವನು ಹಾಸಿಕೊಂಡಿದ್ದ ಜಮಖಾನವನ್ನೂ ಹೊದ್ದಿದ್ದ ಕಂಬಳಿಯನ್ನೂ ಸೇರಿಸಿ ಹೊಲಿದುಬಿಟ್ಟೆ. ಬೆಳಿಗ್ಗೆ ಅವನು ಎದ್ದ ಕೂಡಲೆ ಕತ್ತಿನವರೆಗೆ ಕರಡಿಯಂತೆಯೂ ಮೇಲಕ್ಕೆ ಮನುಷ್ಯನಂತೆಯೂ ಕಾಣುತ್ತಿದ್ದನು. ಆಗ ನಮ್ಮ ಮತ್ತೊಬ್ಬ ಸ್ನೇಹಿತನು ಅವನ ಭಾವಚಿತ್ರವನ್ನು ತೆಗೆದುಬಿಟ್ಟನು. ಈಚೆಗೆ ಆ ಚಿತ್ರವನ್ನು ಅವನಿಗೆ ತೋರಿಸಿದರೆ ಸರಿ, ನಕ್ಕು ನಕ್ಕು ಹೊಟ್ಟೆ ಹುಣ್ಣಾ ಗುತ್ತಿದ್ದಿತು.

೧೯೨೧ನೇ ವರ್ಷ ನಾವಿಬ್ಬರೂ ಓದುವುದನ್ನು (ಸ್ಕೂಲನ್ನು) ಬಿಟ್ಟೆವು. ನಾನು ಹಳ್ಳಿಗೆ ಹೋಗಿ ವ್ಯವಸಾಯಕ್ಕೆ ಪ್ರಾರಂಭಿಸಿದೆ. ಅವನು ಮಲೆನಾಡಿನ.... ಹಳ್ಳಿಗೆ ಹೋಗಿ ಒಂದು ಅಂಗಡಿಯನ್ನು ಪ್ರಾರಂಭಿಸಿದನು. ಈಗ ೩ ವರ್ಷದ ಕೆಳಗೆ ಅವನನ್ನು ಒಂದು ಸಲ ನೋಡಿದೆ. “ಏನೋ ಇಂಟರ್ ಮ್ಯಾರೇಜ್ ಬೇಡವೇನೊ? ಐಂಗಾರ್‍ರ್ ಹೆಣ್ಣನ್ನ ಮದುವೆಯಾಗ್ತೀಯ?" ಎಂದು ಕೇಳಿದೆ.