ಪುಟ:ಹಳ್ಳಿಯ ಚಿತ್ರಗಳು.djvu/೧೫

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ನಾನು ರತ್ನಳ ಮದುವೆಗೆ ಹೋದುದು

____ ____


ರತ್ನಳು ನನ್ನ ಅಕ್ಕನ ಹಿರಿಯ ಮಗಳು. ಅವಳ ಮದುವೆಯನ್ನು ಅತ್ಯಂತ ವೈಭವದಿಂದ ಹೊನ್ನಹಳ್ಳಿಯಲ್ಲಿಯೇ ಮಾಡಬೇಕೆಂದು ನಮ್ಮ ಭಾವನವರಿಗೆ ಬಹಳ ದಿವಸಗಳಿಂದಲೂ ಇಷ್ಟವಿದ್ದಿತು. ಸಾಲದುದಕ್ಕೆ ಅವರು ಸ್ವಲ್ಪ ವೈದಿಕರು. ಹೊನ್ನಹಳ್ಳಿಯು ಕಾವೇರಿ ನದಿಯ ದಡದಲ್ಲಿದೆ. ವೈದಿಕರಿಂದ ಕೂಡಿದ ಊರು, ಪೂರ್ವದಲ್ಲಿ ಕೆಲವು ಗುರುಗಳು ಅಲ್ಲಿಗೆ ಬಂದು, ಊರನ್ನು ತಮ್ಮ ಪಾದಧೂಳಿಯಿಂದ ಪವಿತ್ರವಾಗಿ ಮಾಡಿದ್ದರು. ರತ್ನಳ ಮದುವೆಯನ್ನು ಅಲ್ಲಿಯೇ ಮಾಡಬೇಕೆಂದು ನಿಶ್ಚಯವಾಯಿತು.

ಆದರೆ ನಮ್ಮ ಭಾವನವರು ಮದುವೆಯ ಸಿದ್ಧತೆಯ ವೈಭವದಲ್ಲಿ, ಇದು ಪ್ರವಾಹದ ಕಾಲವೆಂಬುದನ್ನೇ ಮರೆತುಬಿಟ್ಟರು. ಜುಲೈ ತಿಂಗಳ ಕೊನೆ; ಕಾವೇರಿ ನದಿಯ ಆರ್ಭಟ ಹೊನ್ನಹಳ್ಳಿಯವರಿಗೆ ಚೆನ್ನಾಗಿ ಗೊತ್ತು. ೧೯೨೪ ನೇ ಇಸವಿಯಲ್ಲಿ ಮಹಾಪ್ರವಾಹ ಬಂದಿತಲ್ಲಾ, ಆಗಿನ ಅನುಭವವನ್ನು ಹೊನ್ನಹಳ್ಳಿಯವರು ಎಂದೆಂದಿಗೂ ಮರೆಯುವಂತೆ ಇಲ್ಲ. ಪ್ರವಾಹವು ಪ್ರತಿವರ್ಷವೂ ಊರಿನೊಳಕ್ಕೆ ನುಗ್ಗುತ್ತಿದ್ದಿತು. ನದಿಯ ಸಮೀಪದಲ್ಲಿದ್ದವರ ಮನೆಯ ಬಾಗಲಿನ ಮೆಟ್ಟಿಲನ್ನು ಮುಟ್ಟುತ್ತಿದ್ದಿತು. ಆಗ ಸ್ತ್ರೀಯರೆಲ್ಲಾ ಆ ಮೆಟ್ಟಿಲುಗಳ ಮೇಲೆಯೇ ಸೀರೆಗಳನ್ನು ಒಗೆಯು ತಿದ್ದರು. “ಈ ವರ್ಷ ಆ ಮನೆಯ ಬಾಗಲಿನಲ್ಲಿ ಸೀರೆಯನ್ನು ಒಗೆದರು; ಆ ವರ್ಷ ಈ ಮನೆಯ ಬಾಗಿಲಿನಲ್ಲಿ ಸೀರೆಯನ್ನು ಒಗೆದರು"-ಇದೇ ಪ್ರವಾಹದ ಪ್ರಮಾಣವನ್ನು ನಿಶ್ಚಯಿಸುವ ಪಡಿಯಚ್ಚಾಗಿದ್ದಿತು. ಆದರೆ ೧೯೨೪ ನೇ ಇಸವಿಯಲ್ಲಿ ಮನೆಯ ಬಾಗಲಿನಲ್ಲಿ ಸೀರೆಯನ್ನು ಒಗೆಯುವುದು ಮಾತ್ರವೇ ಅಲ್ಲ, ಎಲ್ಲರೂ ಈಜುವಂತಾಯಿತು. ಗುರುಗಳ ಪಾದಧೂಳಿಯಿಂದ ಪವಿತ್ರವಾಗಿದ್ದ ಊರು, ಕಾವೇರಿ ನದಿಯ ಸ್ಪರ್ಶದಿಂದ ಮತ್ತಷ್ಟು ಪುನೀತವಾಯಿತು. ಆದರೆ ಊರು ಕಾವೇರಿಯ ಪೂರ್ಣ ಕೃಪೆಗೆ ಪಾತ್ರ