ವಿಷಯಕ್ಕೆ ಹೋಗು

ಪುಟ:ಹಳ್ಳಿಯ ಚಿತ್ರಗಳು.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಹಳ್ಳಿಯ ಚಿತ್ರಗಳು

ವಾಗಲಿಲ್ಲ. ಅರ್ಧ ಮನೆಗಳು ಪ್ರವಾಹದಲ್ಲಿ ಕೊಚ್ಚಿಹೋದುವು; ಉಳಿದವುಗಳೆಲ್ಲಾ ಈಗಲೋ ಇನ್ನೊಂದು ಗಳಿಗೆಗೊ ಬೀಳುವಂತಿವೆ. ಇದು ೧೯೨೪ರ ವಿಷಯವಾಯಿತು.

ನಮ್ಮ ಭಾವನವರಿಗೆ ಇದಾವುದೂ ಗೊತ್ತಿಲ್ಲದೆ ಇರಲಿಲ್ಲ. ಅವರಿರುವುದು ಹೊನ್ನಹಳ್ಳಿಯಿಂದ ಮೂರು ಮೈಲು ದೂರ ನದಿಯ ಈಚೆ ದಡದಲ್ಲಿ. ಮಹಾಪ್ರವಾಹದಲ್ಲಿ ಅವರೂ ಕಾವೇರಿಯ ಕೃಪೆಗೆ ಪೂರ್ಣವಾಗಿ ಪಾತ್ರರಾಗಿದ್ದರು. ಅವರ ಮನೆಯಲ್ಲಿ ಯಾವೆಡೆ ನೋಡಿದರೂ ಕತ್ತುದ್ದ ನೀರು ನಿಂತಿದ್ದಿತು. ಕಣಜದ ಭತ್ತವೆಲ್ಲಾ ಈಜಾಡುತ್ತಿದ್ದಿತು. ಕಬ್ಬಿನ ಗದ್ದೆಗಳೆಲ್ಲಾ ಭಾವಿಗಳಾಗಿದ್ದುವು. ಅವರು ಸಾಮಾನುಗಳನ್ನೆಲ್ಲಾ ತೆಗೆದುಕೊಂಡು ಮದುವೆಗೆ ಎಂಟು ದಿವಸ ಮುಂಚೆ, ಸಂಸಾರ ಸಮೇತರಾಗಿ ತಾವೇನೋ ಹೊನ್ನ ಹಳ್ಳಿಯನ್ನು ಸೇರಿಬಿಟ್ಟರು. ಉಳಿದ ನೆಂಟರಿಷ್ಟರೆಲ್ಲಾ ಎರಡು ಮೂರು ದಿವಸ ಮುಂಚಿತವಾಗಿಯೇ "ವಧೂವರರನ್ನಾಶೀರ್ವದಿಸಿ ಮನಸ್ಸಂತೋಷಪಡಿಸಲು" ಹೋಗಿ ಸೇರಿದರು.

ವಧುವಿನ ಸೋದರಮಾವನಾದ ನಾನೂ ಮದುವೆಗೆ ಹೋಗಬೇಕಷ್ಟೆ. ನಾನೂ ಎರಡು ದಿವಸ ಮುಂಚಿತವಾಗಿ ಬೆಂಗಳೂರಿನಿಂದ ಹೊರಟೆ. ಮಂಡ್ಯದಲ್ಲಿ ರೈಲನ್ನು ಇಳಿದೆ. ಅಲ್ಲಿ ತಲಕಾಡು ಕಡೆಗೆ ಹೋಗುತ್ತಿದ್ದ ಒಂದು ಬಸ್ಸು ನಿಂತಿದ್ದಿತು. ಬಸ್ಸು ಎಂದರೆ ನನಗೆ ಯಾವಾಗಲೂ ಹೆದರಿಕೆ. ಅದರಲ್ಲಿ ಕುಳಿತರೆ ಮತ್ತೆ ಜೀವದೊಂದಿಗೆ ಇಳಿಯುತ್ತೇನೆಯೋ ಇಲ್ಲವೋ ಎಂಬ ಭಯ. ಇದನ್ನು ಕೇಳಿ ಈಗೇನೋ ನೀವು ನಗುತ್ತೀರಿ. ಆದರೆ ನನಗೆ ಉಂಟಾಗಿರುವ ಭಯಂಕರಗಳಾದ ಅನುಭವಗಳು ನಿಮಗೆ ಉಂಟಾಗಿದ್ದರೆ, ನನ್ನ ಮಾತಿನ ಸತ್ಯತೆಯು ನಿಮಗೆ ತಿಳಿಯುತ್ತಿದ್ದಿತು. ಡ್ರೈವರನು ಬಿರುಗಾಳಿಯಂತೆ ೫೦ ಮೈಲಿಯ ವೇಗದಲ್ಲಿ ನಿರ್ಜನ ರಸ್ತೆಯಲ್ಲಿ ಗಾಡಿಯನ್ನು ಓಡಿಸುವುದು ; ಪದೇ ಪದೇ ಹಿಂದುಗಡೆ ತಿರುಗಿ ಪ್ರಯಾಣಿಕರೊಂದಿಗೆ ಹರಟೆ ಹೊಡೆಯುವುದು ; ಮೂಲೆಗಳಲ್ಲಿ ಜೋರಾಗಿ ತಿರುಗಿಸುವುದು ; ಎದುರಿಗೆ ಹುಲ್ಲು ಹೇರಿದ ಎತ್ತಿನ ಗಾಡಿಯೊಂದು ಬರುತ್ತಿದ್ದರೆ, ಗಾಡಿಯವನನ್ನು ಹೆದರಿಸಲು ಮೋಟಾರನ್ನು ಅವನ ಕಡೆಗೆ