ವಿಷಯಕ್ಕೆ ಹೋಗು

ಪುಟ:ಹಳ್ಳಿಯ ಚಿತ್ರಗಳು.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೪೦
ಹಳ್ಳಿಯ ಚಿತ್ರಗಳು

ತೋಟದಲ್ಲಿ ಅನೇಕ ಹೂವುಗಳನ್ನು ಕೊಯ್ದು ತಂದು ಕಮಲೆಗೆ ಕೊಟ್ಟೆ. ಅವಳು ಮಧ್ಯೆ ಮಧ್ಯೆ ಮರುಗವನ್ನೂ ಗುಲಾಬಿಯ ಎಸಳನ್ನೂ ಸಂಪಿಗೆಯ ದಳವನ್ನೂ ಸೇರಿಸಿ ಅತ್ಯಂತ ಅಲಂಕಾರವಾದ ಹಾರವನ್ನು ಕಟ್ಟಿದಳು. ಅವಳ ಕೈ ಚುರುಕನ್ನು ನೋಡಿ ನಾನು ಬೆರಗಾದೆ. ಹೆಂಗಸರಿಗೆ ಕಲೆಯು ಕಲಿಸದೆ ಬರುವುದೇನೋ ಎಂದುಕೊಂಡೆ. ಕಮಲೆಯು ಸುಂದರವಾದ ಆ ಮಾಲೆಯನ್ನು ನನ್ನ ಮೇಲೆ ಎಸೆದಳು. ಆ ಬಾಲ್ಯದಲ್ಲಿಯೂ ನನಗೆ ಅದರಿಂದ ಬಹಳ ಆನಂದವಾಯಿತು. ನಾನು “ಕಮಲೆ ನೀನೆ ಲಕ್ಷ್ಮಿ; ನಾನು ನಿನ್ನ ಭಕ್ತನೆಂದು ಈ ಮಾಲೆಯನ್ನು ನನಗೆ ಕೊಟ್ಟೆಯಾ” ಎಂದೆ. ಕಮಲೆಯು “ಲಕ್ಷ್ಮಿ ಯಾರು? ಭಕ್ತನಾರು? ಏನೋ ಎಸೆದೆ” ಎಂದಳು.

ಆ ಬಾಲ್ಯದಲ್ಲಿ ನಾವು ಆಡಿದ ಆಟಗಳಿಗೆ ಮೇರೆಯುಂಟೆ? ಅವಳು ಹುಡುಗಿ, ನಾನು ಹುಡುಗ, “ನೀನು ದಮಯಂತಿ ನಾನು ನಳ” ಎಂದೆ. ಕಮಲೆಯು “ಅಲ್ಲ ನಾನು ಭಾಮೆ, ನೀನು ಕೃಷ್ಣ” ಎಂದಳು. ಹೀಗೆಲ್ಲಾ ಆಟವಾಡುತ್ತಾ ಮನೆಗೆ ಬಂದಮೇಲೆ ಸ್ವಲ್ಪ ಬೈಗಳವಾಗುತ್ತಿತ್ತು,

ಇದು ಅಂದಿನ ವಿಷಯವಾಯಿತು. ಈಚೆಗೆ ನಾನು ವಿದ್ಯಾರ್ಜನೆಗಾಗಿ ನಮ್ಮ ಹಳ್ಳಿಯನ್ನು ಬಿಟ್ಟು, ಮೈಸೂರು, ಬೊಂಬಾಯಿ ಕಡೆಗೆ ಹೋದೆ. ಕಮಲೆಗೂ ಆಗಲೇ ಮದುವೆಯಾಗಿ ಅವಳೂ ಗಂಡನ ಮನೆಗೆ ಹೊರಟುಹೋದಳು.

ವಿದ್ಯಾಭ್ಯಾಸವು ಮುಗಿದ ನಂತರ ನಮ್ಮ ಹಳ್ಳಿಗೆ ಹೋದೆ. ಕರ್ಣಕಠೋರವಾದ ನುಡಿಯನ್ನು ಕೇಳಿದೆ. ಕಮಲೆ ವಿಧವೆ ಎಂದು ತಿಳಿಯಿತು. ದುಃಖದಿಂದ ಹೃದಯವು ವಿದೀರ್ಣವಾಯಿತು. ನಾನು ಹುಚ್ಚನಂತೆ ಧೂಳಿನಲ್ಲಿ ಬಿದ್ದು ಹೊರಳಿ ಅತ್ತೆ, ಶಾಲೆಯ ಆಟಗಳೆಲ್ಲಾ ನೆನ್ನೆಯವೋ ಎಂಬಂತೆ ತೋರಿತು. ವಿಧಿಯು ಶುದ್ದ ಕುರುಡ, ರಸಿಕನಲ್ಲ; ಕಲೆಯ ತಿರುಳನ್ನು ತಿಳಿಯನು; ಸೌಂದರ್ಯದ ಆಕರವನ್ನೇ ಹಾಳುಮಾಡಿದ; ಬೆಳೆಯುವ ಮುನ್ನ ಗಿಡವನ್ನು ಕುಯಿದ; ಹೂತು ಕಾತು ಫಲ ಬಿಡುವ ಮುನ್ನ ಲತೆಯನ್ನು ಒಣಗಿಸಿದ. ಅಯ್ಯೋ ಕಮಲೆಯಂತಹ ಹುಡುಗಿಗೆ ಇಂತಹ ಗತಿಯೇ ಎಂದುಕೊಂಡೆ.