ಪುಟ:ಹಳ್ಳಿಯ ಚಿತ್ರಗಳು.djvu/೧೫೩

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಅಂದು, ಇಂದು


ನಾನು ಕಮಲೆ ಇಬ್ಬರೂ ಬಾಲ್ಯವನ್ನು ಒಟ್ಟಿಗೆ ಕಳೆದೆವು. ನಾವಿಬೃರೂ ಹೋಗುತ್ತಿದ್ದುದು ಒಂದೇ ಶಾಲೆಗೆ. ನಮ್ಮ ಹಳ್ಳಿಯಲ್ಲಿ ಆಗ ಈಗಿನ ಹಾಗೆ ಹೆಣ್ಣುಹುಡುಗಿಯರಿಗೆ ಪ್ರತ್ಯೇಕವಾದ ಶಾಲೆ ಇರಲಿಲ್ಲ. ನಾನು ನಿತ್ಯ ಹೋಗುವಾಗ ಕಮಲೆಯನ್ನು ಜತೆಯಲ್ಲಿ ಕರೆದುಕೊಂಡೇ ಹೋಗುತ್ತಲಿದ್ದೆ. ಶಾಲೆಗೆ ಹೊತ್ತುಮೀರಿ ಹೋದ ದಿವಸ ತಪ್ಪನ್ನು ಕಮಲೆಯ ಮೇಲೆ ಹಾಕಿಬಿಡುತ್ತಿದ್ದೆ. ಉಪಾಧ್ಯಾಯರು ಕೋಪದಿಂದ ನನ್ನನ್ನು ಹೊಡೆಯಲು ಎತ್ತಿದ್ದ ದೊಣ್ಣೆಯು, ಕಮಲೆಯಮೇಲೆ ತಪ್ಪನ್ನು ಹಾಕಿಬಿಟ್ಟ ಕೂಡಲೆ ಕೆಳಕ್ಕೆ ಬಿದ್ದು ಹೋಗುತ್ತಲಿದ್ದಿತು. ಶಾಲೆಯಲ್ಲಿ ಕಮಲೆಯೇ ರಾಣಿಯೆಂದು ನಿರ್ವಿವಾದವಾಗಿ ತೀರ್ಮಾನವಾಗಿಬಿಟ್ಟಿದ್ದಿತು. ಅವಳ ಮಾತನ್ನು ಹುಡುಗರಾಗಲಿ ಹುಡುಗಿಯರಾಗಲಿ ಮೀರುತ್ತಿರಲಿಲ್ಲ.

ಶಾಲೆಯ ಮುಂದುಗಡೆಯೇ ಕಾಲುವೆ ಹರಿಯುತ್ತಿದೆ. ಕಾಲುವೆ ಏರಿಯ ಕೆಳಗೆ ವಿಶಾಲವಾದ ಭತ್ತದ ಬಯಲು. ಕಾಲುವೆಯ ಮೆಟ್ಟಿಲುಗಳ ಮೇಲೆ ಕಾಲುಗಳನ್ನು ನೀರಿನಲ್ಲಿ ಇಳಿಯಬಿಟ್ಟುಕೊಂಡು ನಾನೂ ಕಮಲೆಯೂ ಮುಳುಗುವ ಸೂರ್ಯನ ಕಿರಣಗಳಿಂದ ಹೊನ್ನಾದ ಪೈರಿನ ಬಯಲನ್ನು ನೋಡುತ್ತಿದ್ದೆವು. ಕಮಲೆಯು ಕೈಯಲ್ಲಿ ನೀರನ್ನು ಎತ್ತಿ ಮೇಲಕ್ಕೆ ಎಸೆದು ಅದು ಮುತ್ತಾಗುವುದನ್ನು ಕಂಡು “ನೋಡು, ನೋಡು, ಅದ. ನಿನಗೆ” ಎನ್ನುತ್ತಿದ್ದಳು. ಚೀರು ಕೊಳವೆಯಲ್ಲಿ ನೀರನ್ನು ತುಂಬಿ ನನ್ನ ಮೇಲೆ ಚಿಮ್ಮುತ್ತಿದ್ದಳು.

ನಮ್ಮ ತಂದೆಯವರಿಗೆ ಒಂದು ತೋಟವಿದೆ. ಶಾಲೆ ಮುಗಿದನಂತರ ನಾವು ತೋಟಕ್ಕೆ ಹೋಗುತ್ತಿದ್ದೆವು. ಅಲ್ಲಿ ಕಮಲೆಯ ಎದುರಿಗೆ ನಾನೆ ಧೀರ: ಸೀಬೆಮರ, ಚಕ್ಕೋತದ ಮರ, ಕಿತ್ತಲೆ ಮರ ಮೊದಲಾದುವುಗಳನ್ನೆಲ್ಲಾ ಹತ್ತಿ ಹಣ್ಣುಗಳನ್ನು ಕೊಯ್ಯುತ್ತಿದ್ದೆ. ಕಮಲೆಯು ಅವುಗಳನ್ನೆಲ್ಲಾ ಸುಲಿಯುತ್ತಿದ್ದಳು. ಇಬ್ಬರೂ ತಿನ್ನುತ್ತಿದ್ದೆವು. ಒಂದು ದಿವಸ ನಾನು