ಪುಟ:ಹಳ್ಳಿಯ ಚಿತ್ರಗಳು.djvu/೨೨

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
ಹಳ್ಳಿಯ ಚಿತ್ರಗಳು

ಯನ್ನು ಸೇರಿಕೊಳ್ಳುವ ಪದ್ದತಿಯಿತು. ಯಾತಕ್ಕೆಂದರೆ ಆ ತೋಪಿನಲ್ಲಿ ಭೂತ ಪಿಶಾಚಿಗಳಿವೆಯೆಂದು ಹತ್ತಾರು ತಲೆಗಳಿಂದ ಪ್ರಸಿದ್ಧವಾಗಿದೆ. ಈ ಜೀತಗಾರನಂತೂ ಒಂದು ದಿವಸ ಆ ತೋಪಿನಲ್ಲಿ ಜಡೆಮುನಿಯನ್ನು ಪ್ರತ್ಯಕ್ಷವಾಗಿ ನೋಡಿಯೇಬಿಟ್ಟನಂತೆ. ಅದು ಬೆಳದಿಂಗಳಿನಂತೆ ಬಿಳುಪಾದ ಬಟ್ಟೆಯನ್ನು ಧರಿಸಿ, ಉದ್ದವಾದ ಜಡೆಯನ್ನು ಹೊತ್ತು, ಹಿಂದು ಮುಂದಾದ ಕಾಲಿನ ಹೆಜ್ಜೆಯುಳ್ಳದುದಾಗಿ, ಬಹಳ ಎತ್ತರವಾಗಿದ್ದಿತಂತೆ. ಜಡೆಮುನಿಯನ್ನು ಇಷ್ಟು ಸ್ಪಷ್ಟವಾಗಿ ಕಂಡವನು, ಆ ದಾರಿಯಲ್ಲಿ ಕತ್ತಲೆಯಲ್ಲಿ ಮತ್ತೆ ಹೋದಾನೆ? ನಾವು ಅವನಿಗೆ ಒಂದು ಲಾಂದ್ರವನ್ನು ಹತ್ತಿಸಿ ಕೊಟ್ಟೆವು. ಆದರೂ ಅವನು ಹೋಗಲೋ ಬೇಡವೋ ಎಂಬುದಾಗಿ ಅನುಮಾನಿಸುತ್ತ ನಿಂತಿದ್ದನು. ಆ ವೇಳೆಗೆ ಸರಿಯಾಗಿ ರಸ್ತೆಯಲ್ಲಿ ಒಂದು ಮೋಟಾರ್ ಬಸ್ಸು ಒಂದು ನಿಂತಿತು. ನಿತ್ಯ ೪ ಘಂಟೆಗೆ ಬರುತ್ತಿದ್ದ ಬಸ್ಸು ಅದು. ಈ ದಿವಸ ೬ ಘಂಟೆಗೆ ಬಂದಿತು. ಅದರ ಮುಂದಲ ಎರಡು ಬೆಳಕುಗಳೂ ಸೂರ್‍ಯನ ಮರಿಗಳಂತೆ ಪ್ರಕಾಶಿಸುತ್ತಾ ರಸ್ತೆಯನ್ನು ಒಂದು ಫರ್ಲಾಂಗ್ ದೂರ ಬೆಳಗುತ್ತಿದ್ದು, ಅದನ್ನು ನೋಡಿದ ಕೂಡಲೆ ಜೀತಗಾರನು “ಸ್ವಾಮಿ ಬಸ್ಸು ನಿಂತದೆ, ಅದರ್‍ಬೆಳಕ್ಕಲ್ಲಿ ಮನೆ ಸೇರ್ಕೊಂಡ್ಬಿಡ್ತೇನೆ" ಎಂದು ಹೊರಟುಹೋದ. ನಾವು ಅವನ ವಿಷಯವನ್ನೇ ಕುರಿತು ಮಾತನಾಡುತ್ತ ನಗುತ್ತಲಿದ್ದೆವು. ಸುಮಾರು ೧೦ ನಿಮಿಷ ಕಳೆದಿರಬಹುದು. ಆವೇಳೆಗೆ ಮತ್ತೆ ಅವನೇ ಬಾಗಲಿನಲ್ಲಿ "ಬುದ್ದಿ” ಎಂದ. ನಾವು "ಏನೋ ಜಡೆಮುನಿ ಓಡಿಸಿಕೊಂಡೇ ಬಂದುಬಿಡ್ತೀನೋ?"' ಎಂದೆವು. ಅವನು “ಯಾರೋ 'ಬುದ್ಯೋರ್ಮನೆ ದಾರಿ ತೋರಿಸು' ಅಂದ್ರು; ಕರ್‍ಕೊಂಡ್ಬಂದೆ" ಎಂದ. ನಾವು "ಯಾರವರು?" ಎಂದು ಕೇಳುವುದಕ್ಕೆ ಮುಂಚಿತವಾಗಿಯೇ ಬಾಗಿಲಿನಲ್ಲಿ ಅಪರಿಚಿತ ಧ್ವನಿಯೊಂದು "ಸ್ವಾಮಿ, ಈ ರಾತ್ರಿ ಊಟಕ್ಕೆ ಅನುಕೂಲವಾಗುತ್ತದೆಯೆ?" ಎಂದಿತು. ನನ್ನ ಸ್ನೇಹಿತನು "ನೀವು ಯಾವ ಊರು?" ಎಂದನು. ಹೊರಗೆ ನಿಂತಿದ್ದವನು "ನಾವು ಪರಸ್ಥಳ" ಎಂದನು. ನಮ್ಮ ಸ್ನೇಹಿತನು "ಒಳಕ್ಕೆ ಬನ್ನಿ” ಎಂದನು. ಹೊರಗಿನಿಂದ ಇಬ್ಬರು ಒಳಕ್ಕೆ ಬಂದರು. ನೋಡಿದರೆ ಅವರು ನನ್ನ ಸ್ನೇಹಿತನ ಬಂಧುಗಳು. ಅವರೂ ವಿವಾಹಕ್ಕಾಗಿ ಹೊನ್ನ ಹಳ್ಳಿಗೆ