ಪುಟ:ಹಳ್ಳಿಯ ಚಿತ್ರಗಳು.djvu/೨೩

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
ನಾನು ರತ್ನಳ ಮದುವೆಗೆ ಹೋದುದು

ಹೋಗಲು ಬಂದಿದ್ದರು. ಅವರು ಮಾಡಿದ ವಿನೋದದಿಂದ, ನಮಗೆಲ್ಲಾ ಬಹಳ ನಗು ಬಂದಿತು. ನನ್ನ ಸ್ನೇಹಿತನು ಮಾತ್ರ “ನನಗೆ ಮೊದಲೇ ಗೊತ್ತಾಯಿತು” ಎಂದ. ನಾನು “ಇದ್ದರೂ ಇರಬಹುದು” ಎಂದೆ.

ಸರಿ; ಆ ರಾತ್ರೆ ಊಟವಾಯಿತು. ನನ್ನ ಸ್ನೇಹಿತನಿಗೆ ಕನ್ನಡ ಸಾಹಿತ್ಯದ ಜ್ಞಾನವಿಲ್ಲದಿದ್ದರೂ, ಪಂಡಿತನಂತೆ ನಟಿಸುತ್ತಾನೆ. ಜೈಮಿನಿ ಭಾರತ, ಕನ್ನಡ ಭಾರತ, ಇವುಗಳಲ್ಲಿ ೮-೧೦ ಕಷ್ಟ ಕಷ್ಟವಾದ ಪದ್ಯಗಳನ್ನು ಹುಡುಕಿಟ್ಟುಕೊಂಡು, ಯಾರಾದರೂ ಹೋದಕೂಡಲೇ ಅರ್ಥ ಹೇಳಿ ಅಂತ ಪ್ರಾಣ ಹಿಂಡುತ್ತಾನೆ. ಅವರಿಗೆ, ಬರುವುದಿಲ್ಲ ಅಂತ ಹೇಳುವುದಕ್ಕೆ ಅವಮಾನ. “ಹಳ್ಳಿಯಲ್ಲಿ ಕುಳಿತುಕೊಂಡು ಸಾಹಿತ್ಯದ ಗಂಧವನ್ನೇ ಅರಿಯದ ಇವನಿಗೆ ಮಾತ್ರ ಆ ಪದದ ಅರ್ಥ ಗೊತ್ತಿರಬೇಕು; ನಮಗೆ ಗೊತ್ತಿರಬಾರದೆ?” ಎಂದು ಅವರು ಯೋಚಿಸುತ್ತಿದ್ದರು. ಕೆಲವರಂತೂ ನಮ್ಮ ಸ್ನೇಹಿತನ ಮನೆಯ ಬಳಿಗೇ ಸುಳಿಯುತ್ತಿರಲಿಲ್ಲ. ಒಂದುಸಲ ನಾನು ಕಂಡ ವಿಷಯವನ್ನು ಎಂದಿಗೂ ಮರೆಯಲಾರೆ. ಸುಮಾರು ೫ ವರ್ಷಗಳ ಕೆಳಗೆ ನಡೆದುದು. ರಾತ್ರಿ ೮ ಘಂಟೆ ಇದ್ದಿರಬಹುದು. ಊರ ಹೊರಗಿನ ಕೆರೆಗೆ ನಾನೂ ನನ್ನ ಸ್ನೇಹಿತನೂ, ಆಗತಾನೇ ಬಂದಿದ್ದ ಮತ್ತಾರೋ ೨-೩ ಜನರೂ ಬಟ್ಟೆ ಒಗೆಯಲು ಹೋಗಿದ್ದೆವು. ನನ್ನ ಸ್ನೇಹಿತನ ಬಂಧುಗಳಾದ ಹಿರಿಯರೋರ್ವರು ಬೆಂಗಳೂರಿನಿಂದ ಅಲ್ಲಿಗೆ ಬಂದರು. ಅವರು ಬೆಂಗಳೂರಿನಲ್ಲಿ ಸಂಸ್ಕೃತ ವಿದ್ವಾಂಸರು; ಪಾಠಶಾಲೆಯಲ್ಲಿ ಅಧ್ಯಾಪಕರು, ನಾವೆಲ್ಲಾ ಅವರ ಯೋಗಕ್ಷೇಮವನ್ನು ವಿಚಾರಿಸುತ್ತಿರುವಾಗ, ನಮ್ಮ ಸ್ನೇಹಿತನು “ಅದೆಲ್ಲಾ ಇರಲಿ ಪಂಡಿತರೆ, ಎಲ್ಲಿ ನೋಡೋಣ. ಇದಕ್ಕೆ ಅರ್ಥವನ್ನು ಹೇಳಿ” ಎಂದನು. ಸರಿ ಅವನು ಏನು ಹೇಳುತ್ತಾನೆಂಬುದು ನಮಗೆ ತಿಳಿದಿದ್ದಿತು. ಪಾಪ! ಪಂಡಿತರು ೧ ಮೈಲು ನಡೆದುಕೊಂಡು ಬಂದಿದ್ದರು; ಬಹಳ ಆಯಾಸದಿಂದ ಏದುತಿದ್ದರು. ಅವರ ತಲೆಯ ಮೇಲೆ ಒಂದು ಪುಸ್ತಕದ ಗಂಟೂ ಶಾಲುವಿನ ಮೂಟೆಯೂ ಇದ್ದವು. ನಮ್ಮ ಸ್ನೇಹಿತನಿಗೆ ಇದಾವುದರಿಂದಲೂ ಕನಿಕರವುಂಟಾಗಲಿಲ್ಲ. ಅವನು ಗಂಟಲನ್ನು ಸರಿಮಾಡಿಕೊಂಡು, ದಪ್ಪ ದನಿಯಲ್ಲಿ ಹೇಳಿ ಹೇಳಿ ಉರುವಾಗಿದ್ದ. ಈ ಪದ್ಯವನ್ನು ಹೇಳಿದನು.