ಪುಟ:ಹಳ್ಳಿಯ ಚಿತ್ರಗಳು.djvu/೨೪

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೧೦
ಹಳ್ಳಿಯ ಚಿತ್ರಗಳು

ಸುನಿಮೇಷ ಮೀನ ಚಾಪಲ ನೇತ್ರ ಚಕ್ರೋನ್ಮಿ
ಥುನ ಕುಂಭ ಕುಚೆ ಮಕರ ಕೇತು ಮಾತುಲ ಸಮಾ
ನನೆ ಸಿಂಹ ಮಧ್ಯೆ ವೃಷಭಧ್ವಜಾರಿಯ ಪಟ್ಟದಾನೆ ಕನ್ಯಾ ಕುಲಮಣಿ |
ಮನಸಿಜ ಶಶಾಂಕ ಕರ್ಕಟ ಚೇಲಂ ಗುಡುವ
ತನಿ ಸೊಬಗುವಡೆದ ಸಮ್ಮೋಹನದ ಕಣಿಯೆ ಬಾ
ರೆನುತೋರ್ವ ನೀರೆ ಸಖಿಯಂ ಕರೆದಳೀರಾರು ರಾಶಿಯಂ ಹೆಸರಿಪವೊಲು |
|

ಸರಿ, ವಿಧಿಯಿಲ್ಲ. ಪಂಡಿತರು ಅದಕ್ಕೆ ಅರ್ಥವನ್ನು ಹೇಳಿದರು. ನನ್ನ ಸ್ನೇಹಿತ ಅಷ್ಟಕ್ಕೇ ಬಿಡಲಿಲ್ಲ. ಒಂದಾದಮೇಲೊಂದು, ತಾನು ಉರು ಹೊಡೆದಿದ್ದ ಪದ್ಯಗಳನ್ನೆಲ್ಲಾ ಹೇಳಿ, ಅವರಿಂದ ಅರ್ಥವನ್ನು ಹೇಳಿಸಿದ. ಕೊನೆಗೆ ಮನೆಗೆ ಬಂದೆವು.

ಇದು ನನಗೆ ಗೊತ್ತಿದ್ದುದರಿಂದ, ನಾನು ಬೆಂಗಳೂರಿನಿಂದ ಬರುವಾಗಲೇ, ನನ್ನ ಸ್ನೇಹಿತನ ಪ್ರೀತಿಯ ಪದ್ಯಗಳಿಗೆ ಅರ್ಥವನ್ನು ತಿಳಿದುಕೊಂಡು ಹೋಗಿದ್ದೆ. ಆದರೆ ಆ ಪುಣ್ಯಾತ್ಮನಿಗೆ ಇದೂ ಗೊತ್ತಿದ್ದಿತೋ ಏನೊ? ಅವನು ತನ್ನ ಪ್ರೀತಿಯ, ಜೈಮಿನಿಯ ಭಾರತದ “ಸುನಿಮೇಷ ಮಿಾನ ಚಾಪಲ ನೇತ್ರೆ"ಯನ್ನಾಗಲಿ, “ಕಳಹಂಸಮಾಕೀರ್ಣವಾಗಿರ್ದೊಡಂ ಕಾಳಗದ ಕಳನಲ್ಲ"ವನ್ನಾಗಲಿ ಓದಲಿಲ್ಲ. ಕುಮಾರವ್ಯಾಸ ಭಾರತವನ್ನು ತಂದ. ನನಗೆ ನಡುಕ ಹತ್ತಿತು. ಆ ದಪ್ಪ ಪುಸ್ತಕವನ್ನು ನೋಡಿ ಗಾಬರಿಯಾಯಿತು. ಜೊತೆಗೆ ಹಾರ್ಮೋನಿಯಂ ಬೇರೆ ಕಿರೋ ಅನ್ನಿಸಿದ. ಸರಿ; ದೇವರೇ ನನ್ನನ್ನು ಕಾಪಾಡಬೇಕೆಂದುಕೊಂಡೆ. ಹಾರ್ಮೋನಿಯಂ ಸದ್ದು ಕೇಳಿದೊಡನೆಯೇ ಹಳ್ಳಿಯವರೆಲ್ಲಾ ಬಂದು ಸೇರಿಬಿಟ್ಟರು. ನನ್ನ ಯೋಗ್ಯತೆಯ ಒರೆಗಲ್ಲು ಸಿದ್ಧವಾಯಿತೆಂದುಕೊಂಡೆ. ಸ್ನೇಹಿತನೊಂದಿಗೆ “ನನಗೆ ನಿದ್ರೆ ಬರುತ್ತದಯ್ಯ; ನೀನು ಬೇಕಾದರೆ ಓದು. ನಾನು ಮಲಗಿಕೊಳ್ಳುತ್ತೇನೆ" ಎಂದೆ. ಅವನು ಸುಮ್ಮನಿರಬೇಕಲ್ಲ. “ನಾಳೆ ಬೆಳಿಗ್ಗೆ ೧೧ ಗಂಟೆಯವರಿಗೆ ರಾಮಾಯಣದ ಕರ್ಣನಂತೆ ಬಿದ್ದುಕೊ. ನೋಡು, ಇವರೆಲ್ಲಾ ಸೇರಿಬಿಟ್ಟಿದ್ದಾರೆ. ನನಗೆ ತಿಳಿದಂತೆ ಓದುತ್ತೇನೆ. ನೀನು ಅರ್ಥವನ್ನು ಹೇಳಿತೀರಬೇಕು” ಎಂದ. “ನನಗೆ ಬರುವುದಿಲ್ಲ” ಎಂದೆ. "ಎಲ್ಲಾ ಬರುತ್ತೆ” ಎಂದ. ಇನ್ನೇನು ಮಾಡುವುದು. “ಆಗಲಿ” ಎಂದೆ.