ಪುಟ:ಹಳ್ಳಿಯ ಚಿತ್ರಗಳು.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಾನು ರತ್ನಳ ಮದುವೆಗೆ ಹೋದುದು

೧೭

ತಂಗಾಳಿ ಬಹಳ ವೇಗದಿಂದ ಹೊಳೆಯ ಮೇಲೆ ಬೀಸಿ, ಮೈಯನ್ನು ಕಡಿಯುತ್ತಲಿದ್ದಿತು. ಕಲ್ಲಿನ ಒಂದು ಚಿಕ್ಕ ದೇವಸ್ಥಾನವು ದಡದಲ್ಲಿದ್ದು, ಅದರಲ್ಲಿ ೨-೩ ಜನರು ಮಾತ್ರ ಕುಳಿತುಕೊಳ್ಳಲು ಅವಕಾಶವಿದ್ದಿತು. ನಾವು ಹೋಗುವ ವೇಳೆಗೆ ಅದರಲ್ಲಿ ಯಾರೋ ಕುಳಿತಿದ್ದರು. ಬಲಗಡೆ ನದಿಗೆ ಅಣೆಕಟ್ಟನ್ನು ಹಾಕಿದೆ. ನೀರು ಆಳವಾಗಿ ಸಮುದ್ರದಂತೆ ವಿಶಾಲವಾಗಿ ತೋರುತ್ತಿದೆ. ದೇವಸ್ಥಾನದ ಮುಂದುಗಡೆ ನದಿಯಿಂದ ತೆಗೆದ ಕಾಲುವೆ ಹರಿಯುತ್ತಿದೆ. ಮುಂದುಗಡೆ ನದಿ, ಬಲಗಡೆ ಅಣೆಕಟ್ಟು; ಎಡಗಡೆ ನದಿ, ಹಿಂದೆ ಕಾಲುವೆ. ಸನ್ನಿವೇಶವೇನೋ ಬಹಳ ಚೆನ್ನಾಗಿದ್ದಿತು. ಆದರೆ ನಮ್ಮ ಮನಸ್ಸು ಆ ಸನ್ನಿವೇಶದ ಸುಖವನ್ನು ಅನುಭವಿಸುವ ಸ್ಥಿತಿಯಲ್ಲಿರಲಿಲ್ಲ. ಪ್ರವಾಹದಿಂದ ವಿಸ್ತಾರವಾದ ನದಿಯು ೩ ಫರ್ಲಾಂಗಿನಷ್ಟು ಅಗಲವಾಗಿದ್ದಿತು. ಹರಿಗೋಲು ಎದುರು ದಡದಲ್ಲಿ ಚಿಕ್ಕ ಹಕ್ಕಿಯಂತೆ ಕಾಣುತ್ತಿದ್ದಿತು. ಗಾಳಿಯು ಬೋರೆಂದು ಬೀಸುತ್ತಿದ್ದುದರಿಂದ ನದಿಯಲ್ಲಿ ದೊಡ್ಡ ದೊಡ್ಡ ತೆರೆಗಳೆದ್ದು, ದಡವನ್ನು ಬಡಿಯುತ್ತಿದ್ದುವು. ಆ ಗಾಳಿಯು ನಿಲ್ಲುವವರೆಗೆ, ಹರಿಗೋಲು ಈಚೆ ದಡಕ್ಕೆ ಬರುವ ಸಂಭವವಿರಲಿಲ್ಲ. ಬಿರುಗಾಳಿಯು ಯಾವಾಗ ನಿಲ್ಲುತ್ತದೆಯೋ ಬಲ್ಲವರಾರು? ಒಂದು ದಿವಸವೆಲ್ಲಾ ಅದು ವೇಗವಾಗಿ ಬೀಸಿದರೂ, ಅದನ್ನು ಬೇರೆ ಯಾರೂ ಶಿಕ್ಷಿಸುವಂತೆ ಇಲ್ಲ. ಶಿಕ್ಷೆಯು ಯಾವಾಗಲೋ ಗಾಳಿಯ ಮಗನಾದ ಹನುಮಂತನಿಗೆ ಆಗಿ, ಅವನ “ಸೋಟೆಯ ಉರಗಾಯಿತೇ” ಹೊರತು, ಗಾಳಿಗೆ ಏನೂ ಆಗಲಿಲ್ಲ. ಗಂಟೆ ೯-೧೦-೧೧-೧೨ ಆಯಿತು. ಹರಿಗೋಲು ಬರಲೇ ಇಲ್ಲ. ಹೊರಡುವಾಗ ನಮ್ಮ ಸ್ನೇಹಿತನ ಹೆಂಡತಿ “ಸ್ವಲ್ಪ ಕಾಫಿ ತಿಂಡಿ ಮಾಡಿಕೊಂಡು ಹೋಗಿ" ಎಂದಿದ್ದರು. ಪುಣ್ಯಾತ್ಗಿತ್ತಿ ಅಷ್ಟು ಹೇಳಿದ್ದೆ ಸಾಕು ಎಂದು ನಾವು ತಿಂದಿದ್ದರೆ ಚೆನ್ನಾಗಿತ್ತು. "ಅರ್ಧ ಗಂಟೆಯೊಳಗೆ ಹೊಳೆ ದಾಟಿಬಿಡುತ್ತೇವೆ" ಎಂದು ಹೆಮ್ಮೆಯಿಂದ ಹೊರಟುಬಿಟ್ಟೆವು. ಹೊಟ್ಟೆ ಹಸಿವು ಪ್ರಾರಂಭವಾಯಿತು. ನೋಡಿಕೊಳ್ಳಿ ಯಾವುದು ಬೇಕಾದರೂ ತಡೆಯ ಬಹುದು. ಹೊಟ್ಟೆ ಹಸಿವು ಮಾತ್ರ ತಡೆಯುವುದಕ್ಕೆ ಆಗುವುದಿಲ್ಲ. ಅದಕ್ಕೇ ವಿಶ್ವಾಮಿತ್ರನಂತಹ ಋಷಿಯೂ ಕೂಡ ನಾಯಿಯ ಮೂಳೆ ಕಡಿದ. ನನ್ನ ಚೀಲದಲ್ಲಿ ಎರಡು ಮಾವಿನ ಹಣ್ಣುಗಳನ್ನು ಇಟ್ಟಿದ್ದೆ. ಅವನ್ನು ತೆಗೆದೆ.