ಮುದುಕರಿಗೆ ಒಂದು ಕೊಡೋಣ ಅಂದರೆ ಬೇಡವೆಂದುಬಿಟ್ಟರು. ನಾನೂ ನನ್ನ ಜೊತೆಯಲ್ಲಿದ್ದ ಮತ್ತೊಬ್ಬ ಹುಡುಗನೂ ಒಂದೊಂದು ಹಣ್ಣನ್ನು ತಿಂದೆವು. ಆದರೆ ರಾವಣನ ಹೊಟ್ಟೆಗೆ ಅರಕಾಸಿನ ಮಜ್ಜಿಗೆ ಎಂದಂತಾಯಿತು ಅದು. ಆ ಒಂದು ಹಣ್ಣನ್ನು ತಿಂದಮೇಲೆ ಹಸಿವು ಇನ್ನೂ ಹೆಚ್ಚಾಗಲು ಪ್ರಾರಂಭಿಸಿತು.
ಸುಮಾರು ಎರಡು ಗಂಟೆಯ ವೇಳೆಗೆ ಎದುರು ದಡದಲ್ಲಿ ಹರಿಗೋಲನ್ನು ಮೇಲಕ್ಕೆ ಎಳೆಯಲು ಪ್ರಾರಂಭಿಸಿದರು. ಪಟ್ಟಣಗಳಲ್ಲಿದ್ದುಕೊಂಡು ಸೇತುವೆಯ ಮೇಲೆ ನಡೆಯುವವರಿಗೆ ಹರಿಗೋಲನ್ನು ಮೇಲಕ್ಕೆ ಎಳೆದರೆಂದರೆ, ಅರ್ಥವೇ ಆಗುವುದಿಲ್ಲ. ಮೇಲಕ್ಕೆ ಎಂದರೆ ಎಲ್ಲಿಗೆ ಆಕಾಶಕ್ಕೋ?” ಅಂತ ಕೇಳಿದ ನಮ್ಮ ಸ್ನೇಹಿತ ಒಬ್ಬ. ಪ್ರವಾಹದ ಕಾಲದಲ್ಲಿ ದೋಣಿಯಾಗಲಿ ಹರಿಗೋಲಾಗಲಿ ನಾವು ಒಂದು ದಡದಲ್ಲಿ ಎಲ್ಲಿ ಬಿಡುತ್ತೇವೆಯೋ ಅದೇ ನೇರದಲ್ಲಿ ಎದುರು ದಡವನ್ನು ಸೇರುವುದಿಲ್ಲ. ಅಂಬಿಗರು ಈಚೆ ದಡದಲ್ಲಿ ಬಿಟ್ಟ ನೇರದಿಂದ, ಸುಮಾರು ಒಂದು ಫರ್ಲಾಂಗು, ಎರಡು ಫರ್ಲಾಂಗು ಕೆಳಗಡೆ ಎದುರು ದಡವನ್ನು ಸೇರುತ್ತದೆ. ಅದಕ್ಕಾಗಿ ಅಂಬಿಗರು ಹರಿಗೋಲನ್ನು ಎರಡು ಫರ್ಲಾಂಗ್ ಮೇಲಕ್ಕೆ ಎಳೆದು ಬಿಡುತ್ತಾರೆ. ಆದರೂ ಕೂಡ ಅದು ಅವರು ಹೊರಟ ನೇರದಿಂದ ಎರಡು ಫರ್ಲಾಂಗ್ ಕೆಳಕ್ಕೆ ಸೇರುತ್ತದೆ.
ಹರಿಗೋಲಿನ ಕಡೆ ನೋಡಿ ನೋಡಿ ನಮಗೆ ತಲೆನೋವು ಹತ್ತಿಬಿಟ್ಟಿತು. ಕಣ್ಣು ಉರಿಯುವುದಕ್ಕೆ ಪ್ರಾರಂಭಿಸಿತು. ಸ್ವಲ್ಪ ಹೊತ್ತಿನೊಳಗೆ ದೂರದಲ್ಲಿ ನದಿಯಲ್ಲಿ ಯಾವುದೋ ಕಪ್ಪಾಗಿ ಚಲಿಸುವಂತೆ ಕಂಡಿತು. ಹರಿಗೋಲು ಹೊರಟಿತು. ಈಚೆಯ ದಡವನ್ನು ಸೇರಿತು. ಹರಿಗೋಲನ್ನೇ ನೋಡಿಲ್ಲವೆಂದು ಹೇಳುತ್ತಿದ್ದ ನಮ್ಮ ಮುದುಕರಿಗೆ ಅದನ್ನು ತೋರಿಸಿದೆ.
ಗಾಳಿಯು ಇನ್ನೂ ಬೀಸುತ್ತಲೇ ಇದ್ದಿತು. ಅಲೆಗಳು ಭಯಂಕರವಾಗಿ ಏಳುತ್ತಿದ್ದುವು. ಹರಿಗೋಲನ್ನು ಆಗಲೇ ಎದುರು ದಡಕ್ಕೆ ಬಿಡಲು ಅಂಬಿಗರು ಇಷ್ಟಪಡಲಿಲ್ಲ. ನಮ್ಮ ಮನಸ್ಸಿನಲ್ಲಿ, ಹರಿಗೋಲಿನಲ್ಲಿ ಕುಳಿತು ಬಿಟ್ಟರೆ ಸಾಕು. ಆಚೆ ದಡಕ್ಕೆ ಹೋಗುತ್ತೆ ಎಂದು. ಅಂಬಿಗರು ೮ ಜನ ರಿದ್ದರು; ಕೊನೆಗೆ ಅವರಿಗೆ ಸಿಟ್ಟು ಹತ್ತಿತು. ನಮ್ಮ ಹಿಂಸೆಯನ್ನು ತಾಳ