ಪುಟ:ಹಳ್ಳಿಯ ಚಿತ್ರಗಳು.djvu/೩೭

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೨೩
ನಾನು ರತ್ನಳ ಮದುವೆಗೆ ಹೋದುದು

ನಡಿಗೆ, ಪ್ರಳಯಕಾಲದ ಕಾಳಿಯ ಕ್ರೌರ್‍ಯದಂತಹ ಆ ನರ್ತನ; ಈ ಶುಭ್ರವಾದ ಜೊನ್ನೊಸರುವ ತಿಂಗಳಿನ ಬಿಳಿಯ ಸೀರೆ, ಆ ರಕ್ತವು ತೊಟ್ಟಿಕ್ಕುತಿರುವ ಭಯಂಕರವಾದ ಮಲಿನ ವಸನ; ನಲ್ಲನ ಕೊರಗನ್ನು ನಗಿಸುವ ಮುಗುಳುನಗೆಯ ಬೆಳದಿಂಗಳನ್ನು ಪಸರಿಸುವ ನದಿಯ ಈಗಿನ ಬೆಡಗು, ಗಂಡನನ್ನೇ ನುಂಗುವಂತೆ ಕ್ರೌರ್‍ಯವನ್ನು ತೋರಿಸುವ ಆಗಿನ ನದಿಯ ಘರ್ಜನೆ--ಪರಸ್ಪರ ವಿರುದ್ಧವಾದ ಈ ಎರಡು ರೂಪವನ್ನೂ ಒಂದೇ ನದಿಯು ತೋರುವುದೆಂದು ಹೇಗೆ ತಾನೆ ನಂಬಲಾದೀತು!

ಕಾವೇರಿ ನದಿಯು ಕೋಪವಡಗಿದ ಹೆಂಡತಿಯ ನಗೆಯಂತೆ, ಈ ಸೌಮ್ಯ ರೂಪದಿಂದ, ಸರಸದಿಂದ ಕರೆಯುವಾಗ ಯಾರು ತಾನೆ ಅದರ ಪ್ರಭಾವವನ್ನು ತಪ್ಪಿಸಿಕೊಳ್ಳುವುದಕ್ಕೆ ಆಗುತ್ತದೆ. ಬೆಸ್ತರು “ಮಹಾತಾಯಿ ಶಾಂತಳಾದೆಯಾ? ನಿನ್ಮಕ್ಕಳ್ಮೇಲೆ ಇಂತಹ ಕ್ರೌರ್ಯವನ್ನ ತೋರಿಸಬಹುದೆ? ನಾವು ಮಾಡಿದ ಯಾವ ಪಾಪಕ್ಕೆ ಇದು ಪ್ರಾಯಶ್ಚಿತ್ತ" ಎಂದು ಅಡ್ಡಬಿದ್ದರು. ಅನಂತರ ಹರಿಗೋಲಿನಲ್ಲಿ ಕುಳಿತುಕೊಂಡು "ಬನ್ನಿ" ಎಂದು ನಮ್ಮನ್ನು ಕರೆದರು. ನಮ್ಮ ಮಾವ ಮುದುಕರು ಹರಿಗೋಲನ್ನು ಕಂಡುದು ಇದೇ ಮೊದಲು. ಈ ಮೊದಲಿನ ಅನುಭವವೇ ಅವರಿಗೆ ಸಾಕಾಯಿತು. ಮಧ್ಯಾಹ್ನದ ಭಯವೂ ನೀರಿನ ಅಪಮೃತ್ಯುವೂ, ಅಂತರ ಪಿಶಾಚಿಯ ದೃಶ್ಯವೂ ಅವರ ಕಣ್ಣಿನಿಂದ ಮರೆಯಾಗಿರಲಿಲ್ಲ. ಅವರು ಅದನ್ನು ನೆನಸಿಕೊಂಡೇ ಇನ್ನೂ ನಡುಗುತ್ತಿದ್ದರು. ಅವರು ಇಗೋ ಪುಣ್ಯಾತ್ಮ ನಿನಗೆ ದೊಡ್ಡ ನಮಸ್ಕಾರ. ಈ ಕಾವೇರಿ ತಾಯಿಯ ತಂಟೆ ಬೇಡ. ಹರಿಗೋಲಿನ ಸಹವಾಸ ಮೊದಲೇ ಬೇಡ. ಮದುವೆಯ ಸುಖವನ್ನು ಇಲ್ಲಿಯೇ ಕಂಡಂತೆ ಆಯಿತು. ಈ ವೃದ್ಧಾಪ್ಯದಲ್ಲಿ ದೇವರು ಕೊಟ್ಟ ರಾಗಿ ಅಂಬಲಿ ಕುಡಿದುಕೊಂಡು, ಮನೆಯಲ್ಲಿ ಬೆಂಕಿಯ ಮುಂದೆ ಬೆಚ್ಚಗೆ ಕುಳಿತಿರುವುದನ್ನು ಬಿಟ್ಟು, ಈ ಮಳೆ, ಗಾಳಿ, ಛಳಿಯಲ್ಲಿ ಹೊಡೆಸಿಕೊಳ್ಳುವುದು ಯಾವ ಹಣೆಬರಹ. ವಧೂವರರಿಗೆ ಇಲ್ಲಿಂದಲೇ ಆಶೀರ್ವಾದ ಮಾಡಿ, ಹೀಗೆಯೇ ಹಿಂದಿರುಗುತ್ತೇನೆ" ಎಂದರು. ಅಂತೂ ಅವರನ್ನೂ ಸಮಾಧಾನಮಾಡಿ ಹರಿಗೋಲಿಗೆ ಕೂರಿಸಿದ್ದಾಯಿತು. ಯಾವ ತೊಂದರೆಯೂ ಇಲ್ಲದೆ ಎದುರು ದಡವನ್ನು ಸೇರಿದೆವು.