ಪುಟ:ಹಳ್ಳಿಯ ಚಿತ್ರಗಳು.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೪

ಹಳ್ಳಿಯ ಚಿತ್ರಗಳು

ಆ ಕಡೆ ನಿಂತಿದ್ದ ನಮ್ಮ ನೆಂಟರೆಲ್ಲಾ ನಮ್ಮನ್ನು ನೋಡಿ ನಕ್ಕರು. ಹರಿಗೋಲು ಒಂದು ಸಲ ಅರ್ಧ ನದಿಗೆ ಬಂದು ಹಿಂದಕ್ಕೆ ಹೋದುದನ್ನು ಕಂಡು ಅವರ ಆನಂದಕ್ಕೆ ಪಾರವಿಲ್ಲದಂತಾಯಿತಂತೆ. ಮರವು ತೇಲಿ ಬಂದಾಗ, ನಾವು ಕಿರಚಿದ ಕೂಗು ನದಿಯ ಆಚೆ ತೋಪಿನಲ್ಲಿ ಪ್ರತಿಧ್ವನಿತವಾಯಿತಂತೆ. ಒಬ್ಬನು “ಯಾರೂ ಕಾಣದ ಮಹಾ ಹೊಳೆಯೊ?" ಎಂದನು. ಮತ್ತೊಬ್ಬನು “ಇಂತಹ ಹೊಳೆಯನ್ನು ನಾನು ಹತ್ತು ಸಲ ಈಜಿಕೊಂಡೇ ದಾಟಿದ್ದೇನೆ" ಎಂದನು. ಮತ್ತೊಬ್ಬನು ನನ್ನ ಹೆಗಲಿನ ಮೇಲೆ ಕೈಯಿಟ್ಟು “ಅಲ್ಲವೊ ನಿನಗೆ ಈಜು ಬರುತ್ತೆ, ಅರ್ಧ ಹೊಳೆಗೆ ಬಂತೆಲ್ಲಾ ಹರಿಗೋಲು, ಆಗ ಬಿದ್ದು ಈಜಿಬಿಡೋಕೆ ಆಗಲಿಲ್ಲವೇ?” ಎಂದನು. ಉಳಿದವರೆಲ್ಲಾ ಹೇಳಿದ್ದು ಹೋಗಲಿ ಅಂದರೆ, ನಮ್ಮ ಭಾವನೂ ಕೂಡ "ಏನು ಮಹಾ ಹೊಳೆಯೋ” ಅಂದ. ನಾನು ಕೋಪದಿಂದ "ಹೌದಯ್ಯ ಹೊಳೆಯಲ್ಲಿ ದೊಡ್ಡ ಪ್ರವಾಹದಲ್ಲಿ ನೀರು ಕುಡಿದು, ನಿಮಗೂ ನಿಮ್ಮ ಮನೆಯ ಗೋಡೆಗಳಿಗೂ ಅಭ್ಯಾಸವಾಗಿದೆ. ಆದರೆ ನಾವಿದ್ದಂತೆ ಮಧ್ಯಾಹ್ನ ನೀವು ಮೃತ್ಯುಮುಖದಲ್ಲಿ ನಿಂತಿದ್ದರೆ, ಆಗ ಗೊತ್ತಾಗುತ್ತಿತ್ತು. ನಿಮಗೆ ಅಳು, ನಮಗೆ ನಗು. ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ” ಎಂದೆ. ನಮ್ಮ ಮುದುಕರು ಕೋಪದಿಂದ “ದೊಡ್ಡ ಪ್ರವಾಹದಲ್ಲಿ ಈ ಊರು ಪೂರ್ಣವಾಗಿ ಕೊಚ್ಚಿ ಹೋಗಿದ್ದರೆ, ನಮಗೆ ಈಗ ಬರೋ ಕಷ್ಟವೇ ತಪ್ಪುತಿತ್ತು” ಎಂದು ಘರ್ಜಿಸಿದರು.

ಮದುವೆಯು ಎಲ್ಲಾ ಮದುವೆಗಳಂತೆ ವೈಭವದಿಂದ ಜರುಗಿತು. ಅದರಲ್ಲಿ ವಿಶೇಷವೇನೂ ಇರಲಿಲ್ಲ. ಆದರೆ ನಾನು ಹೋದದ್ದರಲ್ಲಿ ಮಾತ್ರ ವಿಶೇಷವಿತ್ತು. ಅದನ್ನು ನಿಮಗೆ ಹೇಳಿದ್ದೇನೆ.