ಆದರೆ ಆ ಗದ್ದಲದಲ್ಲಿ ಅವಳೊಂದಿಗೆ ಒಂದು ಮಾತನ್ನೂ ಆಡಲು ಅವಕಾಶವಿರಲಿಲ್ಲ. ಅಲ್ಲದೆ ಅವಳಿಗೆ ಆರತಿ ಅಕ್ಷತೆ, ಅರಸಿನ ಕುಂಕುಮ, ಹಸೆಮಣೆ, ಇವುಗಳ ಸಂಭ್ರಮ. ಹೊತ್ತಿಗೆ ಸರಿಯಾಗಿ ಅವಳು ನನಗೂ ಗುಂಡುವಿಗೂ ಒಂದೊಂದು ಲೋಟ ಕಾಫಿ ತಂದುಕೊಡುತ್ತಿದ್ದುದೇ ನಮ್ಮ ಪುಣ್ಯವೆಂದುಕೊಳ್ಳಬೇಕಾಯಿತು.
ಊಟವಾದ ನಂತರ, ಉಳಿದ ನೆಂಟರಿಷ್ಟರೆಲ್ಲ ಇಸ್ಪೀಟ್ ಪ್ರಾರಂಭಿಸಿಬಿಟ್ಟರು. ನಾನೂ ಗುಂಡುವೂ ಇಸ್ಪೀಟ್ ಆಟ ಸ್ವಲ್ಪ ಹೊತ್ತು ನೋಡಿದೆವು. ಆದರೆ ಬೇಸರಿಕೆ ಆಯಿತು. ಊರ ಹೊರಗಡೆ ಹೋಗಿಬರೋಣ ಬಾ ಎಂದು ಹೇಳಿಕೊಂಡು ಇಬ್ಬರೂ ಹೊರಟೆವು. ಅಂದು ಮಳೆಗಾಲ; ಸೋನೆಯು ಅರ್ಧಗಂಟೆಗೊಂದು ಬಾರಿ ಬರುತ್ತಲೇ ಇದ್ದಿತು. ಸೂರ್‍ಯನು ಎಲ್ಲೊ ದಿವಸಕ್ಕೊಂದು ಸಾರಿ ಮಂಕಾಗಿ ತೋರಿ, ಮೋಡಗಳ ಮರೆಯಲ್ಲಿ ಅವಿತುಕೊಳ್ಳುತ್ತಿದ್ದನು. ನನಗೆ ಚಳಿಯಿಂದ ಮೈ ನಡುಗುತ್ತಿದ್ದಿತು. ಖಾದಿಯ ಶಾಲನ್ನು ಬಲವಾಗಿ ಹೊದೆದುಕೊಂಡು ಕೆರೆಯ ಬಳಿಗೆ ಹೋದೆವು. ಕೆರೆಯ ನೀರು ಕೆಂಪಾಗಿ ತೋರುತ್ತಲಿದ್ದಿತು. ಬಯಲಿನ ಭತ್ತದ ಬೆಳೆಯು ಗಾಳಿಯಿಂದ ಬಳುಕಾಡುತ್ತಿದ್ದಿತು. ದೂರದಲ್ಲಿ ಅಡಿಕೆ ಮಾವು ತೆಂಗುಗಳಿಂದ ಕೂಡಿದ ತೋಟಗಳು, ಭೂಮಿಯ ಸೆರಗಿನಂತೆ ಎದ್ದು ತೋರುತ್ತಿದ್ದುವು. ಮಳೆ ಬಿದ್ದು ಭೂಮಿಯ ಎಲ್ಲಾ ಕಡೆಯ ಹಸುರಾಗಿದ್ದಿತು. ಶಿವಳ್ಳಿಯ ಸುತ್ತ ಕೊಳಗಳೆಲ್ಲ ನೀರಿನಿಂದ ತುಂಬಿದ್ದುವು. ನಾವು ಒಂದು ಕೊಳದ ಬಳಿಗೆ ಹೋದೆವು. ಅದು ಬಹಳ ಸುಂದರವಾದ ಕೊಳ, ನಾಲ್ಕು ಕಡೆಗಳಲ್ಲಿಯೂ ಅದಕ್ಕೆ ಮೆಟ್ಟಲುಗಳನ್ನು ಕಟ್ಟಿದ್ದರು. ಪದೇ ಪದೆ ಮೀನುಗಳು ಮೇಲಕ್ಕೆ ನೆಗೆದು ನೀರಿನೊಳಕ್ಕೆ ಬೀಳುತ್ತಿದ್ದುವು. ಕೆಲವು ಕಮಲಗಳೂ ಒಂದೆಡೆ ಸ್ವಲ್ಪ ಪಾಚಿಯೂ ಬೆಳೆದಿದ್ದವು. ಗಾಳಿಯು ಬರ್‍ರೆಂದು ಬೀಸುತ್ತಿದ್ದಿತು. ಕೊಳದ ದಡದಲ್ಲಿದ್ದ ಮಂಟಪದಲ್ಲಿ ನಾನೂ, ನನ್ನ ಸ್ನೇಹಿತ ಗುಂಡುವೂ ಬೆಚ್ಚಗೆ ಕುಳಿತೆವು.
ಪ್ರಕೃತಿಗೆ ಒಂದು ವಿಧವಾದ ಮಂಕು ಕವಿದಿದ್ದಂತೆ ತೋರಿತು. ಸೋನೆಯ ಮಳೆಯ ಹನಿಯ ಹೊರತು ಮತ್ತಾವ ಶಬ್ದವೂ ಕೇಳುತ್ತಿರಲಿಲ್ಲ. ಮಳೆಗಾಲದ ಕುಳಿರ್ಗಾಳಿಯು ಬೀಸುತ್ತಿದ್ದಿತು. ಪ್ರಕೃತಿಯ