ವಿಷಯಕ್ಕೆ ಹೋಗು

ಪುಟ:ಹಳ್ಳಿಯ ಚಿತ್ರಗಳು.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ನಾವು ಮಾಡಿದ ಒಂದು ಯಾತ್ರೆ
೨೭

ಸ್ತುತಿಪಾಠಕರಾದ ಹಕ್ಕಿಗಳೊಂದೂ ಕಣ್ಣಿಗೆ ಬೀಳಲಿಲ್ಲ. ಒಂದೊಂದು ಸಮಯದಲ್ಲಿ ಮೋಡಗಳು ಬಹಳ ಹೆಚ್ಚಾಗಿ ಗುಡುಗಿ ಪ್ರಕೃತಿಯು ಬಹಳ ದುಃಖದಿಂದ ಬಳಲುವಂತೆ ತೋರುತ್ತಿದ್ದಿತು. ಮೋಡದ ಭಾರವನ್ನು ತಾಳಲಾರದೆ ಬಾನು ನೊಂದು ಅಳುತ್ತಿದ್ದಿತು. ಮಧ್ಯೆ ಮಧ್ಯೆ ಸೋನೆಯು ನಿಂತಾಗ ಗಂಭೀರವಾದ ಮೌನ; ಗಾಳಿಯು ಬೀಸಿದ ಕೂಡಲೆ ಆ ಮೌನವನ್ನು ಭೇದಿಸಿಕೊಂಡು ಪಟ ಪಟನೆ ಮರದ ಎಲೆಗಳಿಂದ ಉದುರುವ ಮಳೆಯ ಹನಿ, ಪ್ರಕೃತಿಯು ನಿದ್ರಾವಸ್ಥೆಯಲ್ಲಿದ್ದು ಕನವರಿಸುತ್ತಿರುವಂತೆ ತೋರಿತು. ಪ್ರಕೃತಿಯು ಈ ಮನೋಧರ್ಮದ ಪರಿಣಾಮವು ನಮ್ಮ ಮೇಲೆಯೂ ಆಯಿತು. ನಾವು ಮಂಕರಾಗಿ ಒಬ್ಬರನ್ನೊಬ್ಬರು ಮರೆತು ಕುಳಿತೆವು. ಗುಂಡುವು ನಿಧಾನವಾಗಿ ಹಾಡಲು ಪ್ರಾರಂಭಿಸಿದನು. ನನ್ನ ಅರಿವೇ ಅವನಿಗೆ ಇರಲಿಲ್ಲ. ತಾನೆಲ್ಲಿರುವೆನೆಂಬುದು ಅವನಿಗೆ ಮರೆತು ಹೋಗಿದ್ದಿತು. ಹಾಡುವುದರಲ್ಲಿ ಅವನು ಪ್ರಚಂಡ ಬಹಳ ಸಣ್ಣ ದನಿಯಲ್ಲಿ ರಾಗಾಲಾಪನೆಮಾಡುತ್ತಿದ್ದನು. ಶಂಕರಾಭರಣ, ಕಲ್ಯಾಣಿ, ಸಾವೇರಿ, ಕಾನಡಾ, ಅಠಾಣ ಎಲ್ಲವೂ ಒಂದೊಂದಾಗಿ ಹೊರಕ್ಕೆ ಬಂದವು. ಗಾನದಿಂದಲೇ ಆವೃತವಾದ ಒಂದು ಲೋಕವನ್ನು ನಾವು ಸೃಷ್ಟಿಮಾಡಿಬಿಟ್ಟೆವು. ಅಠಾಣ ರಾಗವನ್ನು ಗುಂಡನು ಇಂಪಾಗಿ ಹಾಡುವಾಗ ನನ್ನಲ್ಲಿದ್ದ ವಿಮರ್ಶಕನು ಭೇಷ್ ಭೇಷ್ ಎಂದನು. ಅದನ್ನು ಕೇಳಿ ಗುಂಡನು ಗಾನಲೋಕದಿಂದ ಇಹಲೋಕಕ್ಕೆ ಬಂದನು. ಅವನ ೩-೪ ಕವಿತೆಗಳನ್ನು ಹಾಡಿಸಿ ಕೇಳಿದುದಾಯಿತು. ಗಡಿಯಾರವನ್ನು ನೋಡಿದೆ. ನಾವು ಕೊಳದ ದಡದಲ್ಲಿ ೪ ಗಂಟೆಗಳ ಕಾಲ ಕುಳಿತಿದ್ದೆವು ಎಂದು ಗೊತ್ತಾಯಿತು.

ಗುಂಡನು ಹೇಳಿದನು “ಮದುವೆಯ ನಾಲ್ಕು ದಿವಸಗಳೂ ನಾವಿಲ್ಲಿ ಹೀಗೆಯೇ ಬಂದು ಕೂತಿರುವುದಕ್ಕಾಗುವುದಿಲ್ಲ. ಇವತ್ತು ಇಲ್ಲಿಗೆ ಬರದೆ ಇದ್ದಿದ್ದರೆ, ಹೇಗೆ ಕಾಲವನ್ನು ನೂಕುತ್ತಿದ್ದೆವೆಂಬುದೇ ನನಗೆ ಯೋಚನೆ ಯಾಗಿತ್ತು. ಒಂದು ದಿವಸ ಮಟ್ಟಿಗೆ ಎಲ್ಲಿಗಾದರೂ ಹೋಗಿಬರೋಣ-ಓಹೋ ನೀನು ಹಳೇಬೀಡನ್ನು ನೋಡಿದ್ದೀಯಾ?”

ನಾನು ತಕ್ಷಣ ಉತ್ತರ ಕೊಡಲಿಲ್ಲ. ಒಂದು ಘಳಿಗೆ ಯೋಚಿಸಿ “ನೋಡಿದ್ದೇನೆ-ನೋಡಿಲ್ಲ” ಎಂದೆ.