ಪುಟ:ಹಳ್ಳಿಯ ಚಿತ್ರಗಳು.djvu/೪೩

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೨೯
ನಾವು ಮಾಡಿದ ಒಂದು ಯಾತ್ರೆ

೧೭ ಆಗಿತ್ತು. ಪುರೋಹಿತರ ಮಗ, ಹೋಟಲಿನ ಕಡೆ ತಲೆ ತಿರುಗಿಸಿ ಕೂಡ ಮಲಗಿದವನಲ್ಲ. ಆದರೆ ಹಳೇಬೀಡನ್ನು ನೋಡಬೇಕೆಂಬ ಆಸೆ ಅಡಗಿಸಲಸಾಧ್ಯವಾಗಿದ್ದಿತು. ಒಂದು ಶನಿವಾರ ಮಧ್ಯಾಹ್ನ ನಾವು ೨೦ ಜನರೂ ಸ್ಕೌಟು ಮಾಸ್ಟರೊಂದಿಗೆ ಹಳೇಬೀಡಿಗೆ ನಡೆದುಕೊಂಡೇ ಹೊರಟುಬಿಟ್ಟೆವು. ರಾತ್ರಿ ೮ ಗಂಟೆಗೆ ಹಗರೆಗೆ ಹೋದೆವು. ಅಲ್ಲಿ ನಾವು ತೆಗೆದುಕೊಂಡುಹೋಗಿದ್ದ ತಿಂಡಿಯನ್ನು ತಿಂದುದಾಯಿತು. ಕ್ಯಾಂಪ್ ಫೈರ್‌ (Camp fire) ಆಯಿತು. ಅದರ ಸುತ್ತ ಪ್ರತಿಯೊಬ್ಬ ಸ್ಕೌಟೂ ಮನಬಂದಂತೆ ಕಿರಚಿದ; ಹಾಡಿದ. ಮುಸಾಫರ್‌ಖಾನೆಯೊಳಕ್ಕೆ ಹೋಗಿ ಮಲಗಿಕೊಂಡೆವು. ಆದರೆ ಅಲ್ಲಿಯ ಸೊಳ್ಳೆಗಳೊ ದೇವರೇ ಗತಿ. ರಾತ್ರಿಯೆಲ್ಲ ವೀಣೆ ಮತ್ತು ಪಿಟೀಲು, ಕೆಲವು ವೇಳೆ ತಂಬೂರಿ. ನನಗಂತೂ ಕಣ್ಣು ಮುಚ್ಚುವುದಕ್ಕೆ ಆಗಲಿಲ್ಲ. ಉಳಿದವರೆಲ್ಲಾ ಗೊರಕೆ ಹೊಡೆಯುತ್ತಿದ್ದರು. ಇರುಳಿನ ಮೌನದಲ್ಲಿ ಅವರ ಗೊರಕೆಯು ಬಹಳ ಸ್ಪಷ್ಟವಾಗಿಯೂ ಕೆಲವುವೇಳೆ ಗಂಭೀರವಾಗಿ ತೋರುತ್ತಿದ್ದಿತು. ಆ ಗೊರಕೆಯಲ್ಲಿಯೂ ಒಂದು ಕ್ರಮವಿದ್ದಂತೆ ತೋರಿತು. ಪ್ರಶ್ನೆ, ಉತ್ತರ, ಪ್ರಶ್ನೆ ಉತ್ತರ; ಗೊರಕೆಗಳು ಈ ರೀತಿ ನಡೆಯುತ್ತಿದ್ದುವು. ಅವರ ನಿದ್ರೆಯನ್ನು ನೋಡಿ ನನಗೆ ಹೊಟ್ಟೆಯುರಿಯಿತು. ಬ್ರಾಹ್ಮಣರನ್ನು ಕಂಡರೆ ಸೊಳ್ಳೆಗಳಿಗೂ ದ್ವೇಷ. ಬ್ರಾಹ್ಮಣೇತರರನ್ನು ಅವುಗಳೂ ಮುಟ್ಟುವುದಿಲ್ಲವೇನೋ! ಎಂದುಕೊಂಡೆ. ಬೆಳಗಾಯಿತು. ನಡೆದುಕೊಂಡೇ ಹಳೇಬೀಡನ್ನು ಸೇರಿದೆವು. ಆ ವೇಳೆಗೆ ಗಂಟೆ ೧೧ ಆಗಿತ್ತು,

ಸರಿ; ಹಳೇಬೀಡನ್ನು ಮುಟ್ಟಿದ ಕೂಡಲೆ ಮೊದಲು ಅಡಿಗೆಯ ವಿಚಾರ ಚರ್ಚೆಗೆ ಬಂತು. ನಾನೂ ನನ್ನ ಸ್ನೇಹಿತ ಮತ್ತೊಬ್ಬ ಬ್ರಾಹ್ಮಣನೂ, “ಬ್ರಾಹ್ಮಣೇತರರು" ಬೇರೆ ಅಡಿಗೆಮಾಡಿಕೊಳ್ಳಲಿ ಎಂದೆವು. ಆದರೆ ಬೇರೆ ಅಡಿಗೆಗೆ ಬೇರೆ ಪಾತ್ರೆಗಳು ಬೇಕಲ್ಲ. ನಮ್ಮ ಬಳಿ ಪಾತ್ರೆಗಳಿಗೆ ಗತಿ ಇರಲಿಲ್ಲ. ಕೊನೆಯಲ್ಲಿ ನಮ್ಮ ಜಾತಿಯನ್ನು ಉಳಿಸಿಕೊಳ್ಳುವುದಕ್ಕಾಗಿ, ನಾವೇ ಎಲ್ಲರಿಗೂ ಅಡಿಗೆಮಾಡಲು ಒಪ್ಪಿಕೊಂಡುಬಿಟ್ಟೆವು. ಉಳಿದ ಸ್ಕೌಟುಗಳೆಲ್ಲಾ ಆನಂದದಿಂದ ಕಿರಚುತ್ತಾ ಶಿಳ್ಳು ಹಾಕುತ್ತಾ ಈಜುವುದಕ್ಕೆ ದ್ವಾರಸಮುದ್ರಕ್ಕೆ ಹೊರಟುಹೋದರು. ೨೦ ಜನಕ್ಕೆ ಅಡಿಗೆ ಮಾಡೋದು