ಪುಟ:ಹಳ್ಳಿಯ ಚಿತ್ರಗಳು.djvu/೪೪

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೩೦
ಹಳ್ಳಿಯ ಚಿತ್ರಗಳು

ಸಾಮಾನ್ಯವೇ? ಹೊಗೆ ಕುಡಿದು ನಮ್ಮಿಬ್ಬರಿಗೂ ಕಣ್ಣು ಕೆಂಪಾಗಿಬಿಟ್ಟಿತು. ಉಳಿದವರೆಲ್ಲಾ ಕೆರೆಯಲ್ಲಿ ಆನಂದದಿಂದ ಈಜಿ ಮೈನೋವನ್ನೆಲ್ಲಾ ಕಳೆದುಕೊಂಡು ಹೊಸ ಹುರುಪಿನಿಂದ ಬಂದರು. ಮೂರು ಗಂಟೆ ಹೊತ್ತಿಗೆ ಅಡಿಗೆ ಆಯಿತು. ನಮ್ಮನ್ನು ಸ್ವಾರ್ಥಪರರೆಂದು ಅವರು ತಿಳಿಯಬಾರದೆಂದು ನಾವೇ ಅವರಿಗೆಲ್ಲಾ ಬಡಿಸಿಬಿಟ್ಟೆವು. ಅಡಿಗೆಮಾಡಿದ ಆಯಾಸದಿಂದ ನನಗೆ ಊಟ ಸೇರಲಿಲ್ಲ. ರಾತ್ರಿ ನಿದ್ರೆ ಇಲ್ಲದುದರಿಂದ ಒಂದು ಮರದ ನೆರಳಿನಲ್ಲಿ ಮಲಗಿಬಿಟ್ಟೆ. ಚೆನ್ನಾಗಿ ನಿದ್ರೆ ಬಂದಿತು.

ನಾಲ್ಕು ಗಂಟೆಗೆ ಸ್ಕೌಟುಗಳೆಲ್ಲಾ ದೇವಸ್ಥಾನಕ್ಕೆ ಹೋಗಿ ನೋಡಿಕೊಂಡುಬಂದರು. ನಾನು ಮಲಗಿಯೇ ಇದ್ದೆ. ರಾತ್ರಿ ೮ ಗಂಟೆಗೆ ಹೊರಡಲು ನನ್ನನ್ನು ಎಬ್ಬಿಸಿದರು. ಹೊರಟು ಬೆಳಿಗ್ಗೆ ಹಾಸನಕ್ಕೆ ಹಿಂದುರಿಗಿದೆವು. ದೇವಸ್ಥಾನ ಯಾವ ದಿಕ್ಕಿನಲ್ಲಿದೆ ಎಂಬುದನ್ನು ಕೂಡ ನೋಡಲಿಲ್ಲ.”

ನಾನು ಇಷ್ಟು ಹೇಳಿ ಸುಮ್ಮನಾದೆ. ಗುಂಡ ಉದ್ದಕ್ಕೂ ಮುಗುಳುನಗೆ ನಗುತ್ತಲೇ ಇದ್ದ. ಕೊನೆಯ ತಡಿಯಲಾರದೆ ಒಂದುಸಲ ಗಟ್ಟಿಯಾಗಿಯೆ ನಕ್ಕುಬಿಟ್ಟ.

ಸ್ವಲ್ಪ ಚರ್ಚೆ ನಡೆದನಂತರ, ಬೇಲೂರಿಗೆ ಹೋಗಿ ಹಾಗೆಯೇ ಹಳೇಬೀಡನ್ನೂ ನೋಡಿಕೊಂಡು ಹಿಂದಿರುಗಬೇಕೆಂದು ನಮ್ಮಲ್ಲಿ ತೀರ್ಮಾನ ವಾಯಿತು. ಆದರೆ ಇದಕ್ಕೆ ಒಂದು ಅಡಚಣೆಯಿದ್ದಿತು. ಈ ವಿಚಾರ ನಮ್ಮವಳಿಗೆ ತಿಳಿದರೆ, ಅವಳು “ನಾನೂ ಬರುತ್ತೇನೆ” ಎಂದುಬಿಡುತ್ತಿದ್ದಳು. ಆ ಮಳೆಗಾಲದಲ್ಲಿ ಅವಳನ್ನು ಕರೆದುಕೊಂಡು ಹೋಗುವುದೆಲ್ಲಿ? ಕೊನೆಗೆ ಮದುವಣಿಗನಾದ ರಾಜು ಒಬ್ಬನಿಗೆ ಮಾತ್ರ ತಿಳಿಸಿ ಹೊರಟು ಹೋಗಬೇಕೆಂದೂ, ಹಿಂದಿರುಗಿದನಂತರ ನನ್ನ ಹೆಂಡತಿಯ ಹುಬ್ಬುಗಂಟನ್ನೂ, ಮುಖದ ಕೋಪವನ್ನೂ ಒರಸಿ ಸಮಾಧಾನಮಾಡಬಹುದೆಂದೂ ತೀರ್ಮಾನವಾಯಿತು.

ಮರುದಿವಸ ಊಟವಾದನಂತರ ನೆಂಟರೆಲ್ಲಾ ಪದ್ಧತಿಯಂತೆ ಇಸ್ಪೀಟ್ ಆಟದಲ್ಲಿ ಕುಳಿತಿದ್ದರು. ನಮ್ಮವಳು ಎದುರಿಗೇ ಹೂವನ್ನು ಕಟ್ಟುತ್ತಾ ಕುಳಿತಿದ್ದಳು. ನಾವು ಮರುದಿವಸವೇ ಹಿಂದಿರುಗುವವರಾದುದರಿಂದ