ಪುಟ:ಹಳ್ಳಿಯ ಚಿತ್ರಗಳು.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೮

ಹಳ್ಳಿಯ ಚಿತ್ರಗಳು

ಕಂಬಳಿಯನ್ನು ಹಾಸಿ ಇಬ್ಬರೂ ಕುಳಿತುಕೊಂಡೆವು. ನಾನು ಬಾಳೆಯ ಹಣ್ಣನ್ನು ತಿನ್ನಲು ಪ್ರಾರಂಭಿಸಿದೆ. ಒಂದು ಹಣ್ಣನ್ನು ನಾನು ತಿಂದಕೂಡಲೆ ಗುಂಡನೂ ಒಂದು ಹಣ್ಣನ್ನು ತಿಂದನು. ನಾನು "ಹುಂ ಐದು ಇದ್ದದ್ದು ನಾಲ್ಕೆ ಆಯಿತು" ಎಂದುಕೊಂಡೆ. ತಿನ್ನುವ ಗಾಬರಿಯಲ್ಲಿದ್ದುದರಿಂದ ಆಗಲೇ ಗುಂಡನ ಮೇಲೆ ತಿರುಗಿ ಬೀಳಲು ಅವಕಾಶವಾಗಲಿಲ್ಲ. ಎರಡನೇ ಹಣ್ಣನ್ನು ನಾನು ತಿಂದ ಕೂಡಲೇ ಗುಂಡನೂ ಮತ್ತೊಂದು ಹಣ್ಣನ್ನು ತಿಂದುಬಿಟ್ಟನು. ಅನಂತರ ನನ್ನೊಂದಿಗೆ ಜಗಳವಾಡಿ ಮೂರನೆಯ ಹಣ್ಣಿನಲ್ಲೂ ಸಮವಾಗಿ ಅರ್ಧಪಾಲು ಕಿತ್ತುಕೊಂಡನು. "ಬಾಳೆಯ ಹಣ್ಣೇ ಬೇಡ. ಹೊಟ್ಟೆಯಲ್ಲಿ ನಡುಕ ಹುಟ್ಟುತ್ತೆ” ಎಂದಿದ್ದ ಗೃಹಸ್ಥ ಇವ. ಈ ಕಾಲದಲ್ಲಿ ಜನರು ತಾವು ಹೇಳಿದಂತೆ ಎಲ್ಲಿ ನಡೆಯುತ್ತಾರೆ. ನಾನು "ಅಲ್ಲಯ್ಯ ಪುಣ್ಯಾತ್ಮ ಅಲ್ಲೆ ಹೇಳಿದ್ರೆ ಇನ್ನೊಂದಾಣೆ ಹಣ್ಣು ತೆಗೆದು ಕೊಳ್ಳುತ್ತಿದ್ದೆನಲ್ಲ? ” ಎಂದೆ

ಗುಂಡನು "ನನಗೆ ಬೇಕಿರಲಿಲ್ಲ. ನೀನು ತಿನ್ನುತ್ತಿರುವಾಗ ಸುಮ್ಮನೆ ಹೇಗೆ ಕೂತಿರೋದು ಅಂತ ಒಂದು ಚೂರನ್ನು ತಿಂದೆ" ಎಂದ. ನಾನು “ನೀನು ತಿಂದದ್ದು ಒಂದು ಚೂರೇ ಹೌದು” ಎಂದುಕೊಂಡೆ. -

೧೦ ಮೈಲು ಇದ್ದ ಆ ದಾರಿಯಲ್ಲಿ ನಾವು ಚರ್ಚಿಸಿದ ವಿಷಯಗಳಿಗೆ ಮೇರೆ ಇಲ್ಲ. ಜೀವನ, ಮರಣ, ಕಲೆ, ದೇವರು, ಸಾಹಿತ್ಯ, ಸ್ವಾತಂತ್ರ್ಯ, ಹೊಯ್ಸಳರ ವೈಭವ-ಇವುಗಳ ಮೇಲೆಲ್ಲಾ ಯಥೇಚ್ಛವಾಗಿ ಉಪನ್ಯಾಸವನ್ನು ನಡೆಸಿದೆವು. ದಾರಿ ನಡೆದ ಶ್ರಮವೇ ಗೊತ್ತಾಗಲಿಲ್ಲ. ಎಷ್ಟು ಬೇಗ ೧೦ ಮೈಲು ಮುಗಿದುಹೋಯಿತು ಎನಿಸಿತು. ಬೇಲೂರಿಗೆ ಬರುವ ವೇಳೆಗೆ ಒಂದು ಗಂಟೆ ಆಗಿತ್ತು. ಆಗ ಮಳೆ ಸ್ವಲ್ಪ ಗಟ್ಟಿಯಾಗಿಯೆ ಬಂದಿತು. ಕಂಬಳಿ ಇತ್ತಲ್ಲ ಅದನ್ನೆ ಇಬ್ಬರೂ ನಿಲುವಂಗಿಯಂತೆ ಮೈಮೇಲೆ ಹಾಕಿಕೊಂಡುಬಿಟ್ಟೆವು. ಅಲ್ಲೊಂದು ಕಡೆ ಸ್ವಲ್ಪ ಹಲಸಿನತೊಳೆ ಕೊಂಡುಕೊಂಡೆವು. ಅದನ್ನು ತಿನ್ನುವಾಗಲೂ ಇದೇ ಬಗೆಯ ಕಾದಾಟ.

ಪುಣ್ಯಾತ್ಮ ಮೇಷ್ಟು ತುಂಬ ಬಿಸಿನೀರು ಕಾಯಿಸಿ ಇಟ್ಟಿದ್ದ. ಇಬ್ಬರೂ ಸ್ನಾನಮಾಡಿದೆವು. ನಮಗಂತೂ ಒಂದು ಊರನ್ನೇ ನುಂಗಿ