ಪುಟ:ಹಳ್ಳಿಯ ಚಿತ್ರಗಳು.djvu/೫೮

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೪೪
ಹಳ್ಳಿಯ ಚಿತ್ರಗಳು

ಗಳಾದ ಈ ಪಟಾಲಂ ಪೈಕಿ ಒಬ್ಬರಿಗೆ ಭಾಷ್ಯಕಾರರೆಂದು ಹೆಸರಿಟ್ಟು, ಅವರಿಗೆ ಜಡೆ ಹೆಣೆದು, ಕೈನಲ್ಲಿ ಮಣಿಯ ಸರವೊಂದನ್ನು ಕೊಟ್ಟರು. ಮತ್ತೊಬ್ಬನು ಅವರ ಶಿಷ್ಯ. ಅವನ ಕೈನಲ್ಲಿ ಒಂದು ಕೃಷ್ಣಾಜಿನವನ್ನು ಕೊಟ್ಟರು. ಅವರ ಪರಿವಾರಕ್ಕೆ ಸೇರಿದ ಮತ್ತೊಬ್ಬನ ಕೈನಲ್ಲಿ ಒಂದು ತಿರುಪ ಕೂಡೆ; ಅದರೊಳಗೆ ನಾಮ ಮುಂತಾದ ಅಯ್ಯಂಗಾರರ ಆವಶ್ಯಕ ವಸ್ತುಗಳು. ಒಂದು ರಾಮಾನುಜಾಚಾರ್‍ಯರ ಚಿತ್ರಪಟ. ಇಷ್ಟನ್ನೂ ತೆಗೆದುಕೊಂಡು ಈ ಅವ್ಯವಸ್ಥಿತವಾಗಿ ಕೆಲವು ವೇಳೆ ಭಯಂಕರವಾಗಿ ಕೂಗುತ್ತಿದ್ದ ಬಾಲಕರ ತಂಡವು ಪ್ರತಿ ಮನೆಗೂ ಹೋಗುತ್ತಿದ್ದಿತು. ಮೊದಲು ಹೋಗಬೇಕಾದವನು ಕೃಷ್ಣಾಜಿನದ ಶಿಷ್ಯ. ಅವನು ಹೋಗಿ ಮನೆಯಲ್ಲಿ ಪ್ರಶಸ್ತವಾದ ಸ್ಥಳದಲ್ಲಿ ಕೃಷ್ಣಾಜಿನವನ್ನು ಹಾಸುವುದು. ಆಮೇಲೆ ಪಟದ ಶಿಷ್ಯನು ಪಟವನ್ನು ಅದರ ಒಂದು ತುದಿಯಲ್ಲಿ ಗೋಡೆಗೆ ಒರಗಿಸಿಡುವುದು. ಭಾಷ್ಯಕಾರರು ಕೈಯಲ್ಲಿ ಮಣಿಯ ಸರವನ್ನು ಹಿಡಿದುಕೊಂಡು ಗಂಭೀರ ಭಾವದಿಂದ ಪಟದ ಮುಂದೆ ಕೃಷ್ಣಾಜಿನದ ಮೇಲೆ ಕುಳಿತು, ಕೈಯನ್ನು ಮುಗಿದುಕೊಂಡು ಕಣ್ಣು ಮುಚ್ಚಿ ಮಣಿಯನ್ನು ಒಂದೊಂದಾಗಿ ಎಣಿಸುತ್ತಾ ಪಿಟಿಪಿಟಿಗುಟ್ಟುವುದು, ಶಿಷ್ಯರೆಲ್ಲಾ ರಾಮಾನುಜ ಎಂದು ಕೂಗಿ ನಮಸ್ಕಾರ ಮಾಡುವುದು; ಪಾಪ ಈ ಭಾಷ್ಯಕಾರನಿಗೆ ಒಂದೊಂದು ವೇಳೆ ತಡೆಯಲಾರದ ನಗುವು ಬಂದುಬಿಡುತ್ತದೆ. ನಗುವುದಕ್ಕೆ ಅವಕಾಶವಿಲ್ಲ. ಸಂನ್ಯಾಸಿಯ ಯೋಗ್ಯತೆಯನ್ನೂ ಗಾಂಭೀರ್ಯವನ್ನೂ ಉಳಿಸಿಕೊಳ್ಳಬೇಕು. ಏನುಮಾಡುವುದು? ಒಂದೊಂದುಸಲ ಆ ನಗುವು ದಾರಿತಪ್ಪಿ ಹೋಗಿ ದೊಡ್ಡ ಕೆಮ್ಮಲಾಗಿಬಿಡುತ್ತಿದ್ದಿತು. ಭಾಷ್ಯಕಾರರಾಗುವುದು ದೊಡ್ಡ ಗೌರವ. ನನಗೂ ಒಂದುಸಲ ಆ ವೇಷ ಹಾಕಿಬಿಟ್ಟಿದ್ದರು. ನನ್ನ ಅವಸ್ಥೆ ಕೇಳಬೇಡಿ. ನಾನು ಗಂಭೀರವಾಗಿರಬೇಕೆಂದು ಮಾಡಿದ ಪ್ರಯತ್ನವೆಲ್ಲಾ ವ್ಯರ್ಥವಾಯಿತು. ಪ್ರತಿಯೊಂದು ಮನೆಯಲ್ಲಿಯ ಭಾಷ್ಯಕಾರರಿಗೆ ಒಂದು ಸೇರು ಅಕ್ಕಿ, ಒಂದಾಣೆ ಕಾಣಿಕೆ; ಕಾಣಿಕೆಯಲ್ಲ ವಸೂಲಿ. ಏಕೆಂದರೆ ಕೊಡದೆ ಇದ್ದರೆ ಹುಡುಗರು ಬಿಡಬೇಕಲ್ಲ; ರಾಮಾನುಜ ಎಂದು ಮನೆಯ ಹೆಂಚು ಹಾರಿಹೋಗುವಂತೆ ಕೂಗಿ ಕಿವಿಗೆ ಚಿಟರು ಹತ್ತಿಸಿಬಿಡುತ್ತಾರೆ. ಆ ಆಣೆ ಮತ್ತು ಅಕ್ಕಿಯನ್ನು ಉಪಯೋಗಿಸಿ ಈ