ಪುಟ:ಹಳ್ಳಿಯ ಚಿತ್ರಗಳು.djvu/೬೨

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೪೮
ಹಳ್ಳಿಯ ಚಿತ್ರಗಳು

ಮಾತನಾಡುತ್ತಿದ್ದಳು. ಎರಡು ಬಾಗಲುಗಳ ಮೂಲಕ ತನ್ನ ಧ್ವನಿಯ ಅವರಿಗೆ ಕೇಳುವಂತೆ ಜೋಡಿದಾರನು ಕೂಗಬೇಕಾಗಿತ್ತು. ಅದಕ್ಕಾಗಿ ಅವನೊಂದು ಉಪಾಯವನ್ನು ಮಾಡಿದನು. ಅವನ ತರ್ಕವು ಈ ರೀತಿ ನಡೆಯಿತು: "ನಾನು ಗಟ್ಟಿಯಾಗಿ ಕೂಗಿಬಿಟ್ಟರೆ ಬಾಗಲಿನಲ್ಲಿ ಕುಳಿತಿರುವ ನಮ್ಮ ತಂದೆಗೆ ಕೇಳಿಬಿಡುತ್ತೆ. ಸ್ವಲ್ಪ ಮೆಲ್ಲಗೆ ಕೂಗಿದರೆ, ಯಾರಿಗೂ ಕೇಳೋದಿಲ್ಲ, ಏನೂ ಪ್ರಯೋಜನವಾಗುವುದಿಲ್ಲ. ಅದಕ್ಕಾಗಿ ಈ ಉಪಾಯವನ್ನು ಮಾಡುತ್ತೇನೆ. ಕೊಟ್ಟಿಗೆಯ ಬಾಗಲನ್ನು ಸ್ವಲ್ಪ ಸದ್ದು ಮಾಡಿದರೆ ದನಗಳು ಕಿತ್ತುಕೊಂಡಿವೆಯೆಂದು ನೋಡಲು ನಮ್ಮ ತಾಯಿಯೋ ತಂಗಿಯೋ ಬರುತ್ತಾಳೆ. ಅನಂತರ ಮುಂದೆ ಎಲ್ಲಾ ಸುಲಭ."

ಈ ತರ್ಕ ವಾಚಸ್ಪತಿಯು ೮-೧೦ ಸಲ ಹಿತ್ತಲ ಬಾಗಲನ್ನು ಕುಟ್ಟಿದನು. ತೊಟ್ಟಿಯಲ್ಲಿ ಅವನ ತಾಯಿಯ ತಂಗಿಯ ಪಂಜಿನ ಕಳ್ಳರ ವಿಷಯವನ್ನು ಕುರಿತು ಮಾತನಾಡುತ್ತ ಕುಳಿತಿದ್ದರು. ಹಿಂದೆ ಅವರ ಮನೆಗೆ ೨-೩ ಸಾರಿ ಕಳ್ಳರು ನುಗ್ಗಿದ್ದರಂತೆ. ಆ ವಿಚಾರವನ್ನೆಲ್ಲಾ ಅವರು ಮಾತನಾಡುತ್ತಿದ್ದರು. ಅವರ ವಾತಾವರಣವೆಲ್ಲಾ ಕಳ್ಳರಿಂದಲೂ ಭಯದಿಂದಲೂ ತುಂಬಿಹೋಗಿತ್ತು. ಈ ಹಿತ್ತಲ ಬಾಗಲ ಸದ್ದನ್ನು ಅವೇಳೆಯಲ್ಲಿ ಕೇಳಿದ ಕೂಡಲೆ ಅವರು ಬೆಚ್ಚಿಬಿದ್ದರು. ತಮ್ಮ ಕಥೆಯಿಂದ ಕಳ್ಳರ ಪ್ರಪಂಚವನ್ನು ಸೃಷ್ಟಿ ಮಾಡಿದ್ದ ಅವರಿಗೆ ಕಳ್ಳರು ಎದುರಿಗೇ ಬಂದಂತೆ ತೋರಿತು. ತಾಯಿ ಮಗಳಿಬ್ಬರೂ ಬೀದಿಯ ಬಾಗಲಿಗೆ ಹೋದರು. ಮಗಳು ತಂದೆಯೊಂದಿಗೆ "ಯಾರೋ ಹಿತ್ತಲ ಬಾಗಲನ್ನು ಇಡಿಯುತ್ತಿದ್ದಾರೆ. ಈಗ ಒಂದೇ ಸಮನೆ ೧೦-೨೦ ಸಲ ಇಡಿದರು" ಎಂಬುದಾಗಿ ಹೇಳಿದಳು. ಬಾಗಲಿನಲ್ಲಿದ್ದವರೆಲ್ಲಾ ಕೌತುಕದಿಂದ ಒಳಗೆ ಬಂದರು. ಪಾಪ! ನಮ್ಮ ನಾಯಕನು ತಂಗಿಯು ದೀಪವನ್ನು ತರುವುದಕ್ಕೆ ಒಳಕ್ಕೆ ಹೋಗಿದ್ದಾಳೆ. ಅದಕ್ಕೆ ಇಷ್ಟು ತಡವಾಯಿತು ಎಂದು ಸಮಾಧಾನಪಟ್ಟು ಕೊಂಡಿದ್ದನು. ತನ್ನನ್ನು ನೋಡಲು ಇವರೆಲ್ಲಾ ಬರುತ್ತಿರುವುದು ಅವನಿಗೆ ತಿಳಿದಿದ್ದರೆ, ಅವನು ಮತ್ತೆ ಕಪಿಯಂತೆ ಗೋಡೆಯನ್ನು ಹಾರಿ ಓಡಿಬಿಡುತ್ತಿದ್ದನು. ಆದರೆ ವಿಧಿಯು ಅವನಿಗೆ ಇಲ್ಲಿಯೂ ಮೋಸಮಾಡಿತು. ಮೆಲ್ಲನೆ ತೊಟ್ಟಿಯ ಬಾಗಲು ತೆರೆಯಿತು. ದೀಪದ ಬೆಳಕು ಬಾಗಲಿನ ಕಂಡಿಯ