ತಲೆಗೆ ರುಮಾಲಿನಂತೆ ಸುತ್ತಿ, ಆ ಮಡುವಿನ ಬಂಡೆಗೆ ಈಜಿಬಿಟ್ಟ. ಆ ಮಡುವಿನಲ್ಲಿ ಮೊಸಳೆಯಿದೆ ಎಂಬ ಸುದ್ದಿಯಿದೆ. ಆದರೆ ಆಗಿನ ಗಾಬರಿಯಲ್ಲಿ ಅವನಿಗೆ ಯಾವುದೂ ಜ್ಞಾಪಕ ಬರಲಿಲ್ಲ. ಬಂಡೆಯು ವಿಶಾಲವಾಗಿ ದೊಡ್ಡದಾಗಿದೆ. ಜೋಡಿದಾರನು ಅದರಮೇಲೆ ಕುಳಿತುಕೊಂಡ. ಆಕಾಶವು ಸಾವಿರಾರು ನಕ್ಷತ್ರಗಳಿಂದ ಕೂಡಿ ಚಿತ್ರಿತವಾದ ಬಟ್ಟೆಯಂತೆ ಕಾಣುತ್ತಿದ್ದಿತು. ನದಿಯ ನೀರು ಒಂದು ವಿಧವಾದ ಗಾನದಿಂದ ಮುಂದಕ್ಕೆ ಹರಿಯುತ್ತಾ ಸಣ್ಣ ಸಣ್ಣ ಅಲೆಗಳೊಂದಿಗೆ ಆಟವಾಡುತ್ತಿದ್ದಿತು. ತೀರದಲ್ಲಿ ಮರಗಳಿಂದ ತುಂಬಿದ ತೋಪು, ಕರಿಯ ರಾಕ್ಷಸನ ಮೈಯಂತೆ ಕಾಣುತ್ತಿದ್ದಿತು. ಮಧ್ಯೆ ಮಧ್ಯೆ ಮಿಂಚಿನ ಹುಳುಗಳು ಮಿನುಗುತ್ತಿದ್ದುವು. ದೂರದ ಹಳ್ಳಿಯ ನಾಯಿಗಳ ಕೂಗು ಇರುಳ ಶಾಂತಿಗೆ ಮಿಂಚನ್ನೆಸೆಯುತ್ತಿದ್ದಿತು. ಜೋಡಿದಾರನು ಕುಳಿತಿದ್ದಂತೆಯೇ ಕಣ್ಣುಮುಚ್ಚಿ ತೂಕಡಿಸಲಾರಂಭಿಸಿದನು.
ತಾನು ಎಷ್ಟು ಹೊತ್ತು ತೂಕಡಿಸುತ್ತಿದ್ದನೋ ಅದು ಅವನಿಗೆ ಚೆನ್ನಾಗಿ ತಿಳಿಯದು. ಆದರೆ ಒಮ್ಮಿಂದೊಮ್ಮೆ ನದಿಯ ತೀರದಲ್ಲಿ ೨-೩ ಲಾಂದ್ರಗಳು ಇವನ ಕಣ್ಣಿಗೆ ಬಿದ್ದುವು. ಜೋಡಿದಾರನಿಗೆ ಕೂಡಲೇ ತಾನೆಲ್ಲಿರುವೆನೆಂಬುದರ ಅರಿವುಂಟಾಯಿತು. ದಡದಲ್ಲಿ ೧೫-೨೦ ಜನ ಹುಡುಗರು ಗಟ್ಟಿಯಾಗಿ ಮಾತನಾಡುತ್ತಿದ್ದರು. ಒಬ್ಬನು “ಇದು ಅವನ ಕೆಲಸವೇ” ಎಂದನು. ಮತ್ತೊಬ್ಬನು “ಕೈಗೆ ಸಿಕ್ಕಲಿ ಈಗ್ಯಾಕೆ ಮಾತು?” ಎಂದನು. ಮೂರನೆಯವನು “ತೋಟದಿಂದ ಗರಿಯನ್ನು ಹೊತ್ತು ಬೆನ್ನು ಮೂಳೆಯೆಲ್ಲಾ ಇನ್ನೂ ನೋಯುತ್ತಾ ಇದೆ” ಎಂದನು. ನಾಲ್ಕನೆಯವನು "ಇಷ್ಟು ಜನರ ಕೈಗೆ ಅವನು ಸಿಕ್ಕಿಬಿಟ್ಟರೆ ಆಳಿಗೆ ಒಂದು ಗುದ್ದು ಎಂದರೂ ಅವನ ಮೈ ಮಳೆಯೆಲ್ಲಾ ಪುಡಿಯಾಗಿ ಹೋಗುತ್ತೆ" ಎಂದನು. ಜೋಡಿದಾರನಿಗೆ ಅವರ ಮಾತುಗಳನ್ನು ಕೇಳಿ ಮೈಯಲ್ಲಿ ನಡುಕವುಂಟಾಯಿತು. ಅವರೆಲ್ಲರೂ ಜವಾಬ್ದಾರಿಯಿಲ್ಲದ ಇವನ ವಯಸ್ಸಿನ ಹುಡುಗರೇ ಆಗಿದ್ದರು. ಆ ದಿವಸ ತನಗೆ ಚೆನ್ನಾಗಿ ಏಟು ಬೀಳುವುದರಲ್ಲಿ ಅನುಮಾನವಿರಲಿಲ್ಲ. ಆದರೆ ನದಿಯ ಮಧ್ಯದಲ್ಲಿದ್ದೇನಲ್ಲಾ ಭಯವಿಲ್ಲ ಎಂದುಕೊಂಡನು.