ವಿಷಯಕ್ಕೆ ಹೋಗು

ಪುಟ:ಹಳ್ಳಿಯ ಚಿತ್ರಗಳು.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ನಮ್ಮ ಜೋಡಿದಾರರ ಕೆಲವು ಚಿತ್ರಗಳು
೫೩

ಅಷ್ಟು ಹೊತ್ತಿಗೆ ನದಿಯ ತೀರಕ್ಕೆ ಇನ್ನೂ ೧೦-೧೫ ಮಂದಿ ಬಾಲಕರು ಬಂದರು. ಅವರೆಲ್ಲ “ಅವನು ಊರಲ್ಲಿ ಯಾರ ಮನೆಯಲ್ಲಿಯೂ ಇಲ್ಲ. ಪೇಟೆ ಕೋಟೆ ಎಲ್ಲಾ ಹುಡುಕಿದ್ದಾಯಿತು. ಛತ್ರದ ಮಾಳಿಗೆಯ ಮೇಲೂ ಇಲ್ಲ. ಊರೊಳಗಿನ ಹಳೆಯ ದೇವಸ್ಥಾನದಲ್ಲಿಯೂ ಇಲ್ಲ. “ಶೃಂಗಾರ ತೋಟ"ದಲ್ಲಿಯೂ ಇಲ್ಲ. ಸುರಗಿಯ ಮರದಮೇಲೂ ಇಲ್ಲ. ಈ ರಾತ್ರಿಯಲ್ಲಿ ಅವನು ಎಲ್ಲಿಗೆ ಹೋದ ಅನ್ನೋದೆ ಅನುಮಾನ" ಎಂದರು. ಅವರಲ್ಲಿ ಒಬ್ಬನು “ಹಾಗಾದರೇನು ಭೂಮಿಯೊಳಕ್ಕೆ ಹೊರಟುಹೋದನೋ?" ಎಂದನು. ಮತ್ತೊಬ್ಬನು “ನೀರಿನೊಳಗೆ ಮುಳುಗಿದ್ದಾನೋ ಏನೊ" ಎಂದನು. ಇನ್ನೊಬ್ಬನು “ಆ ಮಟ್ಟಿ ಕಲ್ಲಿನ ಮೇಲಕ್ಕೆ ಈಜಿ ಹೋಗಿದ್ದಾನೇನೊ” ಎಂದನು. ಆ ಮಾತನ್ನು ಕೇಳಿ ಜೋಡಿದಾರನಿಗೆ ಹೃದಯವು ಬಾಯಿಗೆ ಬಂದಿತು. ಅವರಲ್ಲಿ ೧೦ ಹುಡುಗರು ಈಜಿ ನೋಡೋಣ ಎಂಬುದಾಗಿ ಬಂಡೆಗೆ ಬಂದು ಬಿಟ್ಟರೆ, ಇವನ ಗತಿ ದೇವರೇ ಗತಿ. ಆದರೆ ಅವರಾರೂ ಈಜಲಿಲ್ಲ. ಒಬ್ಬನು “ಈ ಮಡುವಿನಲ್ಲಿ ಮೊಸಳೆ ಇದೆ. ಅವನು ಇಲ್ಲಿಗೆ ಹೋಗಿಲ್ಲ" ಎಂದನು. ಇನ್ನೊಬ್ಬನು "ಎಲ್ಲಿ ಹೋಗ್ತಾನೆ ಸಾಯ್ತಾನ್ಯೆ? ನಾಳೆ ಸಿಕ್ಕಿಯೇ ಸಿಕ್ಕುತ್ತಾನೆ ಬನ್ನಿ” ಎಂದನು. ಮತ್ತೊಬ್ಬ ಹುಡುಗನು ಗಟ್ಟಿಯಾಗಿ ಕತ್ತಲೆಯನ್ನುದ್ದೇಶಿಸಿ "ಎಲೋ ರಾಮು ಈವತ್ತಿಗೆ ಬದುಕಿಕೊಂಡೆ ಹೋಗು, ನಾಳೆ ಇದೆ ನಿನಗೆ ಹಬ್ಬ” ಎಂದು ಕೂಗಿ ಹೇಳಿದನು. ನದಿಯ ತೀರದಲ್ಲಿ ಕಂಡ ಲಾಂದ್ರಗಳೆಲ್ಲಾ ಊರಕಡೆ ಹೊರಟುಹೋದುವು. ಹೋಗ ಹೋಗುತ್ತಾ ಸ್ನೇಹಿತರ ಧ್ವನಿಯು ದೂರದಲ್ಲಿ ನಿಶ್ಯಬ್ದತೆಯಲ್ಲಿ ಲೀನವಾಯಿತು.

ಜೋಡಿದಾರನು ಯೋಚಿಸಿದ್ದಂತೆಯೇ "ಬೀಸುವ ದೊಣ್ಣೆ ತಪ್ಪಿದರೆ-" ಎಂಬಂತೆ ಆಯಿತು. ಮೊಸಳೆ ಮಡುವಿಗೆ ಇವನು ಈಜಿಕೊಂಡು ಹೋದುದನ್ನು ಕೇಳಿ ಹುಡುಗರು ಭಲಾಭಲಾ ಎಂದರು. ಅದುವರೆಗೆ ಯಾರೂ ಈ ಸಾಹಸವನ್ನು ಮಾಡಿರಲಿಲ್ಲ. ಅವರ ತಂದೆಯು ಮಾತ್ರ "ಮೊಸಳೆಯು ಅವನನ್ನು ನುಂಗದುದೇ ಆಶ್ಚರ್‍ಯ" ಎಂದರು.