ಪುಟ:ಹಳ್ಳಿಯ ಚಿತ್ರಗಳು.djvu/೮೬

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೭೨
ಹಳ್ಳಿಯ ಚಿತ್ರಗಳು

ಸಂತೋಷಪಡುವೆವೆಂದಲ್ಲ; ಆದರೆ ನಮಗೆ ನಗುವನ್ನು ತಡೆಯುವುದಕ್ಕೆ ಆಗುವುದಿಲ್ಲವೆಂದು ಮಾತ್ರ ಅರ್ಥ.

ನಮ್ಮ ಜೋಡಿದಾರರು ಮಿತಿಮೀರಿ ಹೊಟ್ಟೆ ಬೆಳೆಸಿದ್ದಾರೆಂದು ಹೇಳಿದೆ ನಷ್ಟೆ. ಅವರು ಒಂದು ಕುದುರೆಯನ್ನು ಕೊಂಡುಕೊಂಡರು. ಎತ್ತರವಾದ ಕುದುರೆಯನ್ನು ಕೊಂಡರೆ ಅದರ ಮೇಲೆ ನೆಗೆದು ಹತ್ತಲು ತಮಗೆ ಸಾಧ್ಯವಿಲ್ಲದುದರಿಂದ, ತಮಗೆ ಸುಲಭವಾಗಿ ಹತ್ತಲು ಅನುಕೂಲವಾಗುವಂತೆ ಕುಳ್ಳಾದ ಕುದುರೆಯನ್ನೇ-ಕೊಂಡರು. ಆ ಕುದುರೆ ತಂದಾಗಲೇ ನಾವೆಲ್ಲಾ "ಜೋಡಿದಾರರ ಸವಾರಿಗೆ ಈ ಕುದುರೆಯೆ? ಇದರ ಮೇಲೆ ಅವರು ಕುಳಿತುಬಿಟ್ಟರೆ, ಸರ್ಕಸ್ಸಿನಲ್ಲಿ ಆನೆ ಬೈಸಿಕಲ್ ಸವಾರಿ ಮಾಡಿದಂತಾಗುತ್ತದೆ" ಎಂದುಕೊಂಡೆವು. ನಮ್ಮ ಊಹೆಯೂ ತಪ್ಪಾಗಲಿಲ್ಲ. ಪಾಪ, ಆ ಕುದುರೆಯ ಬೆನ್ನು, ಜೋಡಿದಾರರು ಅದರ ಮೇಲೆ ಕುಳಿತ ಕೂಡಲೇ ನೆಲಕ್ಕೆ ಬಗ್ಗಿ ಹೋಗುತ್ತಿದ್ದಿತು. ಹೊಟ್ಟೆಯು ನೆಲದ ಮೇಲೆ ಎಳೆಯುತ್ತಿದೆಯೋ ಎನ್ನುವಂತೆ ತೋರುತ್ತಿದ್ದಿತು. ಅವರದನ್ನು ಹತ್ತುವುದು ಭಗೀರಥ ಪ್ರಯತ್ನ. ಕುದುರೆಯ ಜೀನು ಮತ್ತು 'ರಿಕಾಪ'ನ್ನು ಒಂದು ಕಡೆ ಎರಡು ಆಳುಗಳು ಗಟ್ಟಿಯಾಗಿ ಹಿಡಿದುಕೊಳ್ಳಬೇಕು. ಮತ್ತೊಂದು ಕಡೆ ಇಬ್ಬರು ಬಲವನ್ನೆಲ್ಲಾ ಬಿಟ್ಟು, ಅವರ ಹೊಟ್ಟೆಯನ್ನು ಹಿಡಿದು, ಎತ್ತಿ, ಕುದುರೆಯ ಮೇಲೆ ಹತ್ತಿಸಬೇಕು. ಪ್ರತಿ ಸಲ ಕುದುರೆ ಏರುವಾಗಲೂ ಜೋಡಿದಾರರು ೩-೪ ಪ್ರಯತ್ನಗಳಿಲ್ಲದೆ ಜಯಶಾಲಿಗಳಾದುದೇ ಇಲ್ಲ.

ಒಂದು ದಿವಸ ಅವರು ಹೀಗೆ ಕಷ್ಟ ಪಟ್ಟು ಕುದುರೆಯ ಮೇಲೇರಿ ಕುಳಿತು ಏದುತ್ತಾ, ತಮ್ಮ ಗದ್ದೆಗಳನ್ನು ನೋಡಿಕೊಂಡು ಬರಲು ಹೊರಟರು. ದಾರಿಯಲ್ಲಿ ಒಂದು ಕಡೆ ಒಂದು ಸಲ ಕೆಳಕ್ಕೆ ಇಳಿಯಬೇಕಾಯಿತು. ಅವರು ಕೆಳಕ್ಕೆ ಇಳಿಯುವದೆಂದರೆ ಸಾಮಾನ್ಯವೇ? ಅದಕ್ಕೆ ಮತ್ತೆ ನಾಲ್ಕು ಜನ ಬೇಕು. ನಾನೊಂದು ಸಲ ಬೈಸಿಕಲ್ಲು ಸವಾರಿ ಕಲಿತೆ. ಕುಳಿತುಕೊಂಡು ಸವಾರಿಮಾಡಲು ಬರುತ್ತಿದ್ದಿತು. ಕೆಳಕ್ಕೆ ಇಳಿಯಲು ಬರುತ್ತಿರಲಿಲ್ಲ. ಚಕ್ರವ್ಯೂಹವನ್ನು ಭೇದಿಸುವುದಕ್ಕೆ ಅಭಿಮನ್ಯುವಿಗೆ ತಿಳಿದಿದ್ದರೂ, ಅದರಿಂದ ತಪ್ಪಿಸಿಕೊಂಡು ಹೊರಕ್ಕೆ ಬರಲು ಅವನಿಗೆ