ತಿಳಿಯಲಿಲ್ಲವಲ್ಲಾ, ಹಾಗೆ. ನಮ್ಮ ಚಿಕ್ಕಮ್ಮನ ಮಗುವನ್ನು ಒಂದು ದಿವಸ ನನ್ನ ಬೈಸಿಕಲ್ ಮೇಲೆ ಕುಳ್ಳಿರಿಸಿಕೊಂಡು ಹೆಮ್ಮೆ ತೋರಿಸುತ್ತಾ ಸವಾರಿ ಮಾಡಲು ಪ್ರಾರಂಭಿಸಿದೆ. ಆದರೆ ಇಳಿಯುವುದಕ್ಕೆ ಯಾರಾದರೂ ಹತ್ತಿರ ಇರಬೇಕು. ಅವರ ಬಳಿಗೆ ಬೈಸಿಕಲ್ಲು ಹೋದಾಗ ಮೆಲ್ಲನೆ ಬಿಡಬೇಕು. ಅವರನ್ನು ಹಿಡಿದುಕೊಂಡು ಬೈಸಿಕಲ್ ನಿಲ್ಲಿಸಬೇಕು. ಆಗ ಕೆಳಕ್ಕೆ ನಾನು ಇಳಿಯಬೇಕು. ಇಷ್ಟೆಲ್ಲಾ ಆಗಮಗಳು ನಡೆಯಬೇಕಾಗಿದ್ದಿತು. ಆದರೆ ಆದಿನ ಒಬ್ಬನೂ ನನ್ನ ಕಣ್ಣಿಗೆ ಬೀಳಲಿಲ್ಲ. ನಾನು ಬೈಸಿಕಲ್ಲು ತಿರುಗಿಸಿದ್ದೂ ತಿರುಗಿಸಿದ್ದೇ. ಊರನ್ನು ೮-೧೦ ಸುತ್ತು ತಿರುಗಿಬಿಟ್ಟೆ. ಮಗುವು "ಸಾಕು, ಇಳಿದುಬಿಡುತ್ತೇನೆ" ಎಂದಿತು. ಮಗುವಿನ ತಾಯಿಯು “ಸಾಕು, ಇಳಿಸಿಬಿಡಪ್ಪ, ಎಷ್ಟು ತಿರುಗಿಸಿದರೂ ಮಕ್ಕಳಿಗೆ ಆಸೆ ಇದ್ದೇ ಇರುತ್ತದೆ" ಎಂದರು. ಆದರೆ ಇಳಿಸುವುದು ಅಂದರೆ ಸಾಮಾನ್ಯವೆ? ಊರ ಹೊರಕ್ಕೆ ಹೋಗಿ, ಬೈಸಿಕಲ್ಲನ್ನು ಒಂದು ಮರದ ಮಗ್ಗುಲಿಗೆ ಬಿಟ್ಟು, ಆ ಮರವನ್ನು ಹಿಡಿದುಕೊಂಡು ಇಳಿಯುವ ಸಂಭ್ರಮದಲ್ಲಿ, ನನಗೂ ಮಗುವಿಗೂ ಸ್ವಲ್ಪ ಪೆಟ್ಟಾಯಿತು. ಅವನಿಗೆ 'ಪೆಪ್ಪರ್‌ಮೆಂಟ್' ಕೊಟ್ಟು ಯಾರಿಗೂ ಹೇಳಬೇಡ ಎಂದು ಸಮಾಧಾನಪಡಿಸಿದೆ. ನಮ್ಮ ಜೋಡಿದಾರರ ಸಮಾಚಾರ ಹಾಗಾಯಿತು. ಕುದುರೆಯಿಂದ ಇಳಿಯಬೇಕು. ಆದರೆ ಮಗ್ಗುಲಲ್ಲಿ ಯಾರೂ ಇಲ್ಲ. ಆದದ್ದಾಗಲಿ ಎಂದು 'ರಿಕಾಪಿ'ನ ಮೇಲೆ ತಮ್ಮ ಭಾರವನ್ನೆಲ್ಲಾ ಬಿಟ್ಟು, ಇಳಿಯುವುದಕ್ಕೆ ಸವರಿಸಿದ ಕೂಡಲೆ ಒಂದೇ ಕಡೆಗೆ ಬಂದ ಇವರ ಮಿತಿಮೀರಿದ ಭಾರದಿಂದ 'ರಿಕಾಪು' ಕಿತ್ತುಹೋಯಿತು. ಇವರ ಒಂದು ಕಾಲು 'ರಿಕಾಪಿ'ನಲ್ಲಿ ಸಿಕ್ಕಿಕೊಂಡಿತು. ದೇಹವೆಲ್ಲಾ ನೆಲದ ಮೇಲೆ ಬಿದ್ದುಹೋಯಿತು. ಕುದುರೆಯು ಎಳೆಯುತ್ತಾ ೪ ಹೆಜ್ಜೆ ಮುಂದಿಟ್ಟಿತು. ಆದರೆ ಬಡ ಕುದುರೆ, ಈ ರೋಣಗಲ್ಲನ್ನು ಎಳೆಯಲಾರದೆ ಏದುತ್ತ ಅಲ್ಲಿಯೇ ನಿಂತುಬಿಟ್ಟಿತು. ಪಾಪ, ಜೋಡಿದಾರರಿಗೆ ಸ್ವಲ್ಪ ಏಟು ತಗಲಿತು. ಮಂಡಿಯು ಸುಲಿದು ಹೋಗಿ ರಕ್ತವು ಸೋರುತ್ತಿದ್ದಿತು. ಹೆರಳೆಕಾಯಿ ಗಾತ್ರದ ಅವರ ಮೂಗು, ತೆಂಗಿನಕಾಯಿಯಂತೆ ಬುರು ಬುರು ಊದಿಬಿಟ್ಟಿತು. ಆ ಊದುವಿಕೆಯಿಂದ ಮುಖದಲ್ಲಿ ಕಣ್ಣು ತುಟಿ ಮೂಗು
ಪುಟ:ಹಳ್ಳಿಯ ಚಿತ್ರಗಳು.djvu/೮೭
ಗೋಚರ