ವಿಷಯಕ್ಕೆ ಹೋಗು

ಪುಟ:ಹಳ್ಳಿಯ ಚಿತ್ರಗಳು.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೭೪
ಹಳ್ಳಿಯ ಚಿತ್ರಗಳು

ಬಾಯಿ ಯಾವುದೂ ಗೊತ್ತಾಗದೆ, ಎಲ್ಲಾ ಒಂದೇ ಸಮನಾಗಿದ್ದುವು. ಮಗ್ಗಲು ಗದ್ದೆಯಲ್ಲಿ ನಮ್ಮ ಇಬ್ಬರು ಸ್ನೇಹಿತರು, ಆಳುಗಳ ಕೈಲಿ ಕೆಲಸವನ್ನು ಮಾಡಿಸುತ್ತಿದ್ದವರು, ಜೋಡಿದಾರರು ನೆಲಕ್ಕೆ ಉರುಳಿದುದನ್ನು ಕಂಡು ಓಡಿಬಂದು ಅವರನ್ನು ಎತ್ತಿಕೊಂಡು ಗಾಯವನ್ನು ತೊಳೆದು ಉಪಚಾರಮಾಡಲು ನದಿಯ ತೀರಕ್ಕೆ ಹೊರಟರು. ಆದರೆ ಆ ಪುಣ್ಯಾತ್ಮನನ್ನು ಎರಡು ಜನ ಸುಲಭವಾಗಿ ಎತ್ತುವುದಕ್ಕಾಗುತ್ತದೆಯೆ? ಎಷ್ಟು ತಡೆದರೂ ಸಾಧ್ಯವಾಗದೆ ಇಬ್ಬರಿಗೂ ನಗು ಬಂದುಬಿಟ್ಟಿತು.

ಹೊಳೆಯ ತೀರಕ್ಕೆ ಕರೆದುಕೊಂಡು ಹೋಗಿ ಮಂಡಿಯ ಗಾಯವನ್ನು ತೊಳೆಯುವಾಗಲೂ ಇವರಿಗೆ ಅಸಾಧ್ಯವಾದ ನಗು; ಜೋಡಿದಾರರು ಊದಿದ ಮೊಖದೊಳಗಿಂದ ಎಲ್ಲೊ ಗವಿಯೊಳಗೆ ಮಾತನಾಡಿದಂತೆ ಮಾತನಾಡುವಾಗ ಇವರಿಗೆ ತಡೆಯಲಾರದ ನಗು ಬಂದುಬಿಟ್ಟಿತು. ನಗೆಯ ಕಾರಣಕ್ಕಾಗಿ ಜೋಡಿದಾರರಿಗೆ ಏನೋ ಒಂದು ಸಬೂಬು ಹೇಳಿ, ಮನೆಗೆ ಅವರನ್ನು ಕರೆದುಕೊಂಡು ಬಂದರು.

ಜೋಡಿದಾರರು ಕುದುರೆಯಿಂದ ಬಿದ್ದ ಸಮಾಚಾರವನ್ನು ಕೇಳಿ ನನಗೆ ಆಶ್ಚರವಾಯಿತು. ಬಾಲ್ಯದಲ್ಲಿ ಅವರು ಲಗಾಮು ಕೂಡ ಇಲ್ಲದೆ ಎಂತಹ ದೊಡ್ಡ ಕುದುರೆಯನ್ನಾದರೂ ಸವಾರಿಮಾಡುತ್ತಿದ್ದುದು ನನಗೆ ಗೊತ್ತಿದ್ದಿತು. ನೋಡೋಣವೆಂದು ಅವರ ಮನೆಗೆ ಹೋದೆ. ಆಗಲೂ ಈ ನಗುವಿನ ಅವಾಂತರ. ಅವರ ಮುಖವು ಗಾಳಿ ತುಂಬಿದ 'ಪುಟ್‍ಬಾಲ್ ಬ್ಲಾಡರಿ'ನಂತೆ ಇದ್ದಿತು. ಆ 'ಬ್ಲಾಡರಿನ' ಯಾವುದೋ ಕಡೆಯಿಂದ ಚಿಕ್ಕ ತೂತಿನಿಂದ ಗಾಳಿ ಹೊರಡುವಂತೆ, ಒಂದು ಧ್ವನಿಯು ಹೊರಡುತ್ತಲಿದ್ದಿತು. ಆ ಮುಖವನ್ನು ನೋಡಿ ನನಗೆ ನಗು ಬಂದುಬಿಟ್ಟಿತು. ನಗುವನ್ನು ತಡೆಯಲಾರದೆ ಹೊರಕ್ಕೆ ಬಂದುಬಿಟ್ಟೆ.