ವಿಷಯಕ್ಕೆ ಹೋಗು

ಪುಟ:ಹಳ್ಳಿಯ ಚಿತ್ರಗಳು.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಮ್ಮ ಹೊಳೆಯ ಒಂದು ಅನುಭವ


ನಮ್ಮ ಹಳ್ಳಿಗೆ ಈಗ ಸೇತುವೆ ಆಗಿಬಿಟ್ಟಿರುವುದರಿಂದ, ಹೊಳೆಯ ಪ್ರವಾಹದ ಅವಾಂತರ ಈಗಿನವರಿಗೆ ಸ್ವಲ್ಪವೂ ಗೊತ್ತಾಗುವುದೇ ಇಲ್ಲ. ಆದರೆ ನಮ್ಮ ಹೊಳೆಯ ಕ್ರೌರ್‍ಯಕ್ಕೆ ಸಿಕ್ಕಿ ಕಷ್ಟಪಟ್ಟವರಲ್ಲಿ, ನಮ್ಮ ಊರು ನಿಂಗ ಒಬ್ಬ, ಅವನಿಗೆ ಉಂಟಾದ ಅನುಭವದಲ್ಲಿ ವಿನೋದವೂ ಭಯವೂ ತುಂಬಿಕೊಂಡಿವೆ. ಅವನಿಂದಲೂ, ಅವನ ಅವಸ್ಥೆಯನ್ನು ಕಂಡ ಇತರರಿಂದಲೂ, ಕೇಳಿದುದನ್ನು ನಾನು ನಿಮಗೆ ಹೇಳುತ್ತೇನೆ.

ನಮ್ಮ ಹಳ್ಳಿಗೆ ಎರಡು ಮೈಲಿ ದೂರದಲ್ಲಿ ಪಶ್ಚಿಮದಿಕ್ಕಿನಲ್ಲಿ ಹೇಮಾವತಿ ಮತ್ತು ಯಗಚಿ ನದಿಗಳೆರಡೂ ಸಂಗಮವಾಗುತ್ತವೆ. ಆ ಸ್ಥಳವು ಪುರಾಣ ಪ್ರಸಿದ್ಧವೂ ಪುನೀತವೂ ಆದುದು. ಸಂಗಮಸ್ಥಳದಲ್ಲಿ ವಿಶಾಲವಾದ ಒಂದು ತೋಪಿದೆ. ಅಲ್ಲಿರುವ ಮರಗಳು ಗಗನ ಚುಂಬಿಗಳಾಗಿ, ಶೀತಳವಾದ ನೆರಳನ್ನು ನೆಲದಮೇಲೆ ಪ್ರಸರಿಸುತ್ತವೆ. ಅಲ್ಲೊಂದು ಈಶ್ವರ ದೇವಾಲಯವಿದೆ. ಆ ತೋಪು ಶಾಂತಿಗೆ ನೆಲೆಮನೆಯಾಗಿ, ಅಲ್ಲಿ ಕುಳಿತುಕೊಳ್ಳುವರ ಮನಸ್ಸಿಗೆ ಇಂಪಾದ ಸಮಾಧಾನವನ್ನುಂಟುಮಾಡುತ್ತದೆ. ಮನಸ್ಸಿಗೆ ಬೇಸರಿಕೆಯಾದಾಗ ಆ ತೋಪಿನಲ್ಲಿ ಹೋಗಿ ಎರಡು ಗಳಿಗೆ ಕುಳಿತರೆ ಸಾಕು. ಬಾಹ್ಯ ಪ್ರಕೃತಿಯ ನಿಶ್ಯಬ್ದತೆಯೂ ಶಾಂತಿಯೂ ನಮ್ಮ ಹೃದಯವನ್ನು ಮುಟ್ಟದೆ ಬಿಡುವುದಿಲ್ಲ. ರಮಣೀಯವಾದ ನದಿಯ ತೀರ, ತೀರದ ಉದ್ದಕ್ಕೂ ತೋರಣಗಳನ್ನು ಕಟ್ಟಿರುವಂತೆ ಬಾಗಿರುವ ಮರದ ಹಸುರಾದ ಕೊಂಬೆಗಳು, ಆ ಕೊಂಬೆಗಳಿಂದ ನೀರಿನ ಮೇಲೆ ಉದುರುವ ಅರಳಿದ ಹೂವು, ಹೂವಿನ ಕಂಪನ್ನು ಹೊತ್ತುಕೊಂಡು ಪ್ರಕೃತಿಯ ದೇವಾಲಯದಲ್ಲಿ ಭಕ್ತನಂತೆ ಸಂಚರಿಸುವ ಮಂದ ಮಾರುತ, ಕಲ್ಲುಗಳ ಮೇಲೆ ಜಾರುತ್ತ, ಬಂಡೆಗಳ ಮೇಲೆ ಉರುಳುತ್ತಾ, ಜುಳು ಜುಳು ರವದಿಂದ ಹರಿಯುತ್ತಿರುವ ನದಿ, ತೋಪಿನ ನಿಶ್ಯಬ್ದತೆಗೆ ಆನಂದದಿಂದ ಇಂಪಾದ ಗಾನವನ್ನು ಎಸೆಯುತ್ತಿರುವ ಹಕ್ಕಿಗಳು, ನದಿಯ ಎರಡು ತೀರದ ಉದ್ದಕ್ಕೂ ಹಸುರಾಗಿ ಬೆಳೆದು ನಿಂತಿರುವ