ವಿಷಯಕ್ಕೆ ಹೋಗು

ಪುಟ:ಹಳ್ಳಿಯ ಚಿತ್ರಗಳು.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೭೬
ಹಳ್ಳಿಯ ಚಿತ್ರಗಳು

ಪೈರಿನ ಬಯಲು, ಎರಡು ನದಿಗಳೂ ಒಂದಾಗಿ ಸೇರಿ ವಿಸ್ತಾರವಾದ ಪಾತ್ರ, ಇವುಗಳೆಲ್ಲಾ ಅಲ್ಲಿ ಒಂದಾಗಿ ಪ್ರಕೃತಿಯ ಕಲಾನಿಪುಣತೆಯ ಚಿತ್ರದ ಪರಮಾವಧಿಯ ದೃಶ್ಯವೊಂದು ಅಲ್ಲಿ ಕಣ್ಣಿಗೆ ಬೀಳುತ್ತದೆ.

ಯಗಚಿ ಹೊಳೆಗೆ ಕಳ್ಳ ಹೊಳೆಯೆಂದು ಹೆಸರು ಬಂದಿದೆ. ಭಗವಂತನ 'ಕ್ರಿಮಿನಲ್ ಕೋರ್ಟು' ಅಪರಾಧಿಗಳ ಪೈಕಿ ಇದೂ ಸೇರಿದೆಯೋ ಏನೋ? ಇಬ್ಬನಿಯು ಬಂದರೆ ತುಂಬಿಹೋಗುತ್ತದೆ; ಬೆಳದಿಂಗಳಿಗೆ ಆರಿಹೋಗುತ್ತದೆ. ನಮ್ಮ ನಿಂಗನೂ, ಅವನ ಸ್ನೇಹಿತನಾದ ಬೋರನೂ, ಮುತ್ತುಗದೆಲೆ ತರುವುದಕ್ಕಾಗಿ ಸಂಗಮದ ಹತ್ತಿರ ಹೋಗಿ ಹೊಳೆಯನ್ನು ದಾಟಿ ಆಚೆ ದಡವನ್ನು ಸೇರಿದರು. ನದಿಯಲ್ಲಿ ನೀರು ಮಂಡಿಯುದ್ದ ಬರುತ್ತಿತ್ತು. ಆಗ ಬೆಳಿಗ್ಗೆ ೬ ಗಂಟೆಯಿದ್ದಿರಬಹುದು. ಸ್ವಲ್ಪ ಹೊತ್ತಿನೊಳಗಾಗಿ ಮಳೆ ಬರಲು ಪ್ರಾರಂಭವಾಯಿತು. ಅವರಿಬ್ಬರೂ ಅಲ್ಲಿಯೇ ಇದ್ದ ಈಶ್ವರ ದೇವಾಲಯವನ್ನು ಹೊಕ್ಕರು. ಮಳೆ ಬಿಡಲಿಲ್ಲ. ಮಲೆನಾಡಿನ ಸೋನೆಯಾಗಿ ಪ್ರಾರಂಭಿಸಿದುದು, ಕಲ್ಲು ಮಳೆಯಾಗಿ ಸುರಿಯಲು ಮೊದಲಾಯಿತು. ಮಧ್ಯಾಹ್ನ ೧೨ ಗಂಟೆಯಾದರೂ ಮಳೆ ಸುರಿಯುತ್ತಲೇ ಇದ್ದಿತು. ಸಾಯಂಕಾಲದೊಳಗೆ ಬಿಡಬಹುದೆಂಬ ಸೂಚನೆ ತೋರಲಿಲ್ಲ. ಅಷ್ಟು ಹೊತ್ತಿಗೆ ಮೇಲೆ ಎಲ್ಲೋ ಜೋರಾಗಿ ಮಳೆಯಾಗಿ, ನೂರಾರು ಸಿಂಹಗಳು ಘರ್ಜಿಸಿದಂತೆ ಶಬ್ದ ಮಾಡುತ್ತಾ ಪ್ರವಾಹವು ಬಂದೇಬಿಟ್ಟಿತು. ಮಧ್ಯಾಹ್ನ ಸುಮಾರು ಮೂರು ಗಂಟೆಯ ಹೊತ್ತಿಗೆ ಮಳೆಯು ಸ್ವಲ್ಪ ಕಡಮೆಯಾಯಿತು. ಪ್ರವಾಹವು ಮಾತ್ರ ಮೊದಲಿನಂತೆ ಬರುತ್ತಲೇ ಇದ್ದಿತು.

ಬೋರನಿಗೆ ಚೆನ್ನಾಗಿ ಈಜು ಬರುತ್ತಿತ್ತು. ಆದರೆ ನಿಂಗನಿಗೆ ಈಜಿನ ಗಂಧವೇ ತಿಳಿಯದು. ಹೊಳೆಯ ತೀರದಲ್ಲಿ ಒಂದು ಹಳೆಯ ಹರಿಗೋಲು ಬಿದ್ದಿದ್ದಿತು. ಆ ಕಡುವಿನಲ್ಲಿ ಈಗ ಹರಿಗೋಲನ್ನು ಉಪಯೋಗಿಸುತ್ತಿರಲಿಲ್ಲ. ೪-೫ ವರುಷಗಳ ಹಿಂದೆ ಉಪಯೋಗಿಸುತ್ತಿದ್ದ ಹಳೆಯ ಹರಿಗೋಲದು. ಅದನ್ನು ಇಬ್ಬರೂ ಸೇರಿ ಕಷ್ಟ ಪಟ್ಟು ನದಿಯ ತೀರಕ್ಕೆ ಎಳೆದು ತಂದರು. ನೀರಿಗೆ ಹರಿಗೋಲನ್ನು ಹಾಕಿದ ಕೂಡಲೆ ೨-೩ ಸ್ಥಳಗಳಿಂದ ಒಳಕ್ಕೆ ನೀರು ನುಗ್ಗಲು ಪ್ರಾರಂಭವಾಯಿತು. ಬೋರನು