ಪುಟ:ಹಳ್ಳಿಯ ಚಿತ್ರಗಳು.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಮ್ಮ ಹೊಳೆಯ ಒಂದು ಅನುಭವ

೭೭

ಕೆಲವು ಬೇರುಗಳನ್ನೂ ಸೊಪ್ಪುಗಳನ್ನೂ ತಂದು ಆ ತೂತುಗಳಿಗೆಲ್ಲಾ ತುರುಕಿದನು. ನೀರು ಒಳಕ್ಕೆ ನುಗ್ಗುವುದು ಸ್ವಲ್ಪ ಕಡಮೆಯಾದರೂ ಇನ್ನೂ ನುಗ್ಗುತ್ತಲೇ ಇದ್ದಿತು. ಬೋರನು “ಪರವಾಯಿಲ್ಲ-ಬಾರೊ. ಹೊಳೆ ತಮಟೆ ಅಗಲ ಇದೆ. ಈ ಕಡೆ ಹರಿಗೋಲ್ನ ನೂಕಿ ಕೂತ್ಕಂಡ್ರೆ ಆ ಕಡೆಗೆ ಹೋಗಿ ಸೇರ್ತೇವೆ. ಹೊಳೆ ಇರೋ ಆಳ ಅಷ್ಟರಲ್ಲೇ ಇದೆ” ಎಂದ. ನಿಂಗನಿಗೆ ಇಷ್ಟವಿರಲಿಲ್ಲ. ಬೇಡ ಅಂದರೆ ಗೆಳೆಯ ಎಲ್ಲಿ ತನ್ನನ್ನು ಹೇಡಿ ಎಂದು ಹಾಸ್ಯ ಮಾಡುತ್ತಾನೋ ಎಂಬ ಭಯ. ಹೂ ಅಂದ. ಹರಿಗೋಲಿನಲ್ಲಿ ಕುಳಿತುಕೊಳ್ಳುವಾಗ ಅವನ ಮುಖವು ಮರಣ ದಂಡನೆಗೆ ಗುರಿಮಾಡಲ್ಪಟ್ಟವನ ಮುಖದಂತೆ ತೋರಿತು.

ತೋಪಿನಲ್ಲಿ ಬೇಕಾದಂತೆ ಸುವಾಸನೆಯುಳ್ಳ ಕೆಂಡಸಂಪಿಗೆಯ ಹೂವಿದ್ದಿತು. ನಿಂಗನು ಒಂದು ಚಿಕ್ಕ ಬುಟ್ಟಿಯ ತುಂಬ ಆ ಹೂವುಗಳನ್ನು ಕುಯಿದು ತುಂಬಿದ್ದನು. ಇಬ್ಬರೂ ಕುಯ್ಲಿದ್ದ ೨ ಮುತ್ತುಗದ ಎಲೆಯ ಪಿಂಡಿಗಳನ್ನೂ ಹರಿಗೋಲಿನೊಳಗೆ ಇಟ್ಟುದಾಯಿತು. ಗಣೆಗಾಗಿ ಚಿಕ್ಕದಾದ ಒಂದು ಕೊಂಬೆಯನ್ನು ಮುರಿದು, ಅದರ ಎಲೆಗಳನ್ನೆಲ್ಲಾ ನೆಲದ ಮೇಲೆ ಬಡಿದು ಉದುರಿಸಿದರು. ಇಬ್ಬರೂ ಹರಿಗೋಲಿನಲ್ಲಿ ಕುಳಿತು ಕೊಂಡು ಗಣೆಯಿಂದ ಒಂದು ಸಲ ಮೀಟಿದ ಕೂಡಲೆ ಅದು ಬಹಳ ವೇಗವಾಗಿ ಹೊರಟಿತು. ಪ್ರವಾಹವು ಅತಿ ವೇಗವಾಗಿ ಹೋಗುತ್ತಿದ್ದುದರಿಂದ, ಗಣೆಯನ್ನು ನೆಲಕ್ಕೆ ಅಮುಕಿ ಮೀಟಲು ಅವಕಾಶವೇ ಆಗಲಿಲ್ಲ. ಹರಿಗೋಲು ಪ್ರವಾಹದ ಜೊತೆಯಲ್ಲಿ ಗಂಟೆಗೆ ನೂರು ಮೈಲು ವೇಗದಲ್ಲಿ ಹೋಗುತ್ತಿದ್ದಿತು. ಕಣ್ಣು ಮುಚ್ಚಿ ತೆರೆಯುವುದರೊಳಗಾಗಿ ಒಂದು 'ಫರ್ಲಾಂಗು' ಕೆಳಕ್ಕೆ ಬಂದುಬಿಟ್ಟಿತು. ಆದರೆ ೨೦ ಮಾರು ಮಾತ್ರ ವಿಸ್ತಾರವಾಗಿದ್ದ ಪಾತ್ರವನ್ನು ದಾಟಿ ಎದುರು ದಡವನ್ನು ಸೇರಲಿಲ್ಲ.

ಈ ಮಧ್ಯೆ ಪ್ರವಾಹದ ವೇಗದಿಂದ ಹರಿಗೋಲಿಗೆ ತುರುಕಿದ್ದ ಸೊಪ್ಪು ಬಳ್ಳಿ ಎಲ್ಲಾ ತೇಲಿಹೋಯಿತು. ಎರಡು ಮೂರು ಕಡೆ ನೀರು ಹರಿಗೋಲಿನೊಳಕ್ಕೆ ನುಗ್ಗಲು ಪ್ರಾರಂಭವಾಯಿತು. ಬೋರನು "ಏನ್ಮಾಡೋಣ" ಎಂದನು. ನಿಂಗನು “ಮಾಡೋದೇನು ನೀನು ಈಜ್ಕೊಂಡೋಗು, ನೀರಲ್ಲಿ ಸಾಯೋದು ನನ್ನ ಹಣೇಲಿ ಬರ್ದಿರೋಹಂಗೆ