ದ್ಯಾಂವಕ್ಕೆ ಹಿಗೆ ಹಣಿಕಿ ಹಾಕಿದಳು. “ಅಯ್ಯ ನನ್ನ ಶಿವಣ! ಏನ ಆಕಾರಾಗ್ಯಾವ ಏನ ಮಂಗಮಂಗಾಂಗ ದಿರೇಸ ಮಾಡಿಕೊಂಡಾವ, ನೋಡಿದ್ಯಾ? ನನ್ ಚಿನ್ನಾ ನೆಲ್ಲಾ ಒಯ್ದು ಇದಕಬಜೆದಿದ್ದಾನೇನೋ ಪಾ! ಹೊಟ್ಟಲೆ ಹುಟ್ಟಿ ಬ್ಲೊಂದು; ಬೆನ್ನಿಲೆ ಬಿದ್ದದೊಂದು ಬಾಗಾದಂತಾರದೇನ ಸುಳ್ಳಲ್ಲ ನೋಡು!..” ಅಳ ಹತ್ತಿದಳು. ಮಗನ ಮುಖವನ್ನು ನೋಡಿದಳು ತನ್ನ ಚಿನ್ನದಾಭರಣಗಳ ಹಾನಿಯನ್ನು ಮರೆತಳು, ಹೊಸ ಉಡುಪಿನಲ್ಲಿ ಅವನು ಆಕೆಗೆ ಬಲು ಚೆಂದ ಕಂಡನು, ದ್ರೌಪದಿಯ ಚೆಂದ ಕಂಡಳು.
ಅತ್ತಿತ್ತ ನೋಡಿದಳು. ಒಬ್ಬ ಪೊಲೀಸನನ್ನು ಕರೆದು "ಯಪ್ಪಾ ನಿಮ್ಮ ಕಾಲಿಗೆ ಬೀಳೋನಿ, ನನ್ನ ಮಗನ್ನಟ ಹ್ಯಾಂಗಾರ ಮಾಡಿ ಉಳಸರಿ ನನ್ ತಂದೆ....” ಕೊರಳೊಳಗಿನ ಸರದಾಳಿ ಸಾಮಾನನ್ನು ತೆಗೆದು ಅವನ ಕೈಗೆ ಕೊಟ್ಟಳು. ಕೊರ್ಟ ಖರ್ಚಿಗೆ ಇಲ್ಲಿ ನನ್ನಪ್ಪಾ; ಇಕಾ ಹಿಡಿ. ಹ್ಯಾಂಗಾರ ಮಾಡು, ನನ್ನ ಮಗನ ಬಿಡು ” ಎಂದು ಪುನಃ ಅಳಹತ್ತಿದಳು.
'ಅಂತಹ ಮಗನಿಗೆ ಶಿಕ್ಷೆಯಾದರೆ ಒಳಿತಲ್ಲವೇ ?' ಎಂದು ಅವರು ಕೇಳಿದರು. ಅವಳು ಅತ್ತಳು; ಕಾಲಿಗೆರಗಿ ಬೇಡಿಕೊಂಡಳು. ಹಣವು ಕೋಟಿ ಖರ್ಚಿಗೆ ಹೋಯಿತು. ಆಕೆಯ ಮಗನನ್ನು ಬಿಟ್ಟರು; ಹುಡುಗಿಯನ್ನೂ ಬಿಡಿಸಿದಳು.
ದ್ರೌಪದಿಯು ತನ್ನನ್ನು ತನ್ನ ಗಂಡ ಕಾಡುವನೆಂತಲೂ ಅವನ ಜೊತೆಗೆ ಬಾಳ್ವೆಮಾಡಲು ತನಗೆ ಮನಸಿಲ್ಲವೆಂತಲೂ ಜವಾಬು ಕೊಟ್ಟಳು. ಸೋಡ ಪತ್ರವನ್ನು ಕೊಡಿಸಿರೆಂದು ಸರಕಾರಕ್ಕೆ ಮೊರೆ- ಹೋಗಿ ಬೇಡಿಕೊಂಡಳು. ಆಕೆಯ ಗಂಡ, ಅತ್ತೆ ಅಲ್ಲಿಯೇ ಇದ್ದರು. "ಮದುವೆಯ ಖರ್ಚು ನಗದು ಸಾವಿರ ರೂಪಾಯಿ ಕೊಟ್ಟು, ತಾಳಿಯನ್ನು ಕೊಡಲಿ; ಎಂದರೆ ಪುನಃಪುನಃ ನ್ಯಾಯ ಹೂಡುವದನ್ನು ಬಿಡುವೆವು ” ಅಂದರು.