ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತಾಯಿ ಮಾತಾಯಿ

“ಅಮ್ಮಾ, ಇದೇಯೇನು ಡಾಕ್ಟಲ್ ಚೌಧರಿಯವರ ಮನೆಯು ?”

ಹೆಣ್ಣು ಮಗಳ ಕೂಗನ್ನು ಕೇಳಿದೊಡನೆ, ಅಡಿಗೆಯ ಮನೆಯಲ್ಲಿ ಊಟದ ಸಿದ್ಧತೆಯಲ್ಲಿದ್ದ ಇಂದಿರಾಬಾಯಿಯವರು, ಎಲೆ-ದೊನ್ನೆ ಸಹಿತವಾಗಿಯೇ ಅಂಗಳಕ್ಕೆ ಓಡಿ ಬಂದರು.

ಬಾಗಿಲಲ್ಲೊಂದು ಟಾಂಗಾ ನಿಂತಿತ್ತು. "ಇದೇಯೇನಮ್ಮಾ ಚೌಧರಿ ಡಾಕ್ಟರರ ಮನೆಯು ?"

“ ಹೌದು, ತಾಯಿ, ಒಳಗೆ ಬರಿ."

ನಾಲ್ವತ್ತೈದು-ಐವತ್ತು ವರುಷದ ಇಳಿವಯಸ್ಸಿನ ಚಲುವೆ- ಯೊಬ್ಬಳು ಹದಿನೇಳು-ಹದಿನೆಂಟರ ಸುಕುಮಾರಿಯೊಡನೆ ಇಳಿದು ಬಂದಳು,

"ಕುಳಿತುಕೊಳ್ಳಿರಿ; ಅಗೋ, ಅಲ್ಲಿ ಕುರ್ಚಿಗಳಿಗೆ,”

ಪುಣೆಯಲ್ಲಿ ರಾಮನಾರಾಯಣ ಚಾಳಿನ ಕಡೆಗೆ ಹೋಗುವ ದಾರಿಯಲ್ಲೊಂದು ಮಹಡಿಯ ಮನೆ, ಡಾ. ಚೌಧರಿಯವರು ಅದಕ್ಕೆ ಯಜಮಾನರು. ಮನೆಯಲ್ಲಿ ಆರಸ-ಅರಸಿಯರಿಬ್ಬರೇ. ಡಾಕ್ಟರ್ ಚೌಧರಿಯವರೂ ಈಗಿನ ಕಾಲದಲ್ಲಿ ಡಾಕ್ಟರೀ ಪರೀಕ್ಷೆಯನ್ನು ಕೊಟ್ಟ ವರೇ; ಆದರೂ ಈಗಿನ ಡಾಕ್ಟರರಿಗೂ ಇವರಿಗೂ ಸ್ವಲ್ಪ ವ್ಯತ್ಯಾಸ. ಉಳಿದವರು ಹೇಗೆಯೇ ಇರಲಿ-ಡಾಕ್ಟರ್ ಚೌಧರಿಯವರು ಮಾತ್ರ ದೇವರು-ಧರ್ಮಗಳ ಮೇಲೆ ಒಳ್ಳೆಯ ಶ್ರದ್ಧೆಯುಳ್ಳವರು. ಪಾಪ- ಪುಣ್ಯಕ್ಕೆ ಹೆದರಿ ನಡೆಯುವವರು. ದಿನಾಲು ಸಾಯಂಕಾಲಕ್ಕೆ ಮಡಿಯುಟ್ಟು ಕೊಂಡು ದೇವರಿಗೆ ಮಂಗಳಾರತಿ ಮಾಡಲಿಕ್ಕೇ ಬೇಕು.

ಅ೦ದು ಸಹ ಮಡಿಯಿಂದ ಮಂಗಳಾರತಿ ಮಾಡುವದರಲ್ಲಿ ಮಗ್ನರಾಗಿದ್ದರು. ಅದು ಮುಗಿದೊಡನೆಯೆ, ಇಂದಿರಾಬಾಯಿಯವರು ಹೊರಗೆ ಯಾರೋ ಇಬ್ಬರು ಹೆಣ್ಣು ಮಕ್ಕಳು ಬಂದು ಕುಳಿತಿರುವದಾಗಿ ತಿಳಿಸಿದರು.