ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ದಾಜೀಬಾನ ಬ್ಯಾಂಕು

ದಾಜಿಬಾನು ನಮ್ಮ ನಂಬಿಗಸ್ತ ಆಳು. ನಮ್ಮ ಮಾವಂದಿರು ವಕೀಲಿ ಮಾಡಲಾರಂಭಿಸಿದಾಗಲೆ: ದಾಜೀಬಾನು ನಮ್ಮ ಮನೆಯ ಊಳಿಗತನವನ್ನು ವಹಿಸಿದ್ದನಂತೆ. ನಮ್ಮ ಮಾವಂದಿರು ತೀರಿಹೋದ ಮೇಲೆ ಈಗಿನ ದಿನಮಾನಕ್ಕೆ ನುಸರಿಸಿ, ನಮ್ಮ ಮನೆಯವರೆಲ್ಲ ಮಾವಂದಿರ ಪಟ್ಟವನ್ನೇರಿದ್ದಾರೆ. ಹಳೆಯ ವಕೀಲರ ಬದಲಾಗಿ, ಗಾದಿಯ ಮೇಲೆ ಹೊಸ ವಕೀಲರು ಬಂದರು; ಆದರೆ ಹೊಸ ಆಳು ಬರಲಿಲ್ಲ. ಹೊಸ ಹುರುಪಿನಿಂದ ದಾಜೀಬಾನೇ ನಮ್ಮವರ ಸೇವೆ ಮಾಡುತ್ತಿದ್ದಾನೆ. ದಾಜೀಬಾನಿಗೆ ಈಗ ಏನಿಲ್ಲೆಂದರೂ ನಾಲ್ವತ್ತೈದು ಮೀರಿರಬೇಕು. ಆದರೂ ಎಂತಹ ಗಟ್ಟಿ ಮುಟ್ಟಿ ಆಳು! "ದಾಜೀಬಾ, ನಿನ್ನಿಂದ ಈ ಕೆಲಸವಾಗುವದನು, ಆ ಕೆಲಸವಾಗುವದೇನು ? ” ಎಂದು ನಾನು ಕೇಳಿದರೆ ' ಅಯ್ಯೋ ಬಾಯಾರ, ಆಗದೇನ ಮಾಡತೈತ್ರಿ ? ನಮ್ಮ ಸಣ್ಣ ಧಣ್ಯಾರ ಎತ್ತಿ ಆಡಿಸಿದಾವಾ ನಾನು!!” ಎನ್ನುತ್ತಾನೆ. ಅವನ ಮಾತಿನ ಅರ್ಥವೇನು ಮಾಡಲಿ ? ಅವನ ಸಣ್ಣ ಧಣಿಯರು ಅಷ್ಟು ಭಾರವಾಗಿದ್ದರೆಂದೋ? ಅಥವಾ ಅಷ್ಟು ದಿನಗಳಿಂದ ತಾನು ನಮ್ಮ ಮನೆಯ ಕೆಲಸದಲ್ಲಿ ನುರಿತಿದ್ದನೆಂದೋ ?

ಅವನ ಸಣ್ಣ ಧಣಿಯರು ಹುಟ್ಟುವ ಮೊದಲು ಎರಡು ವರ್ಷ ನಮ್ಮಲ್ಲಿ ಚಾಕರಿಗೆ ನಿಂತಿದ್ದನೆಂದು ದಾಜೀಬಾನು ಹೇಳುತ್ತಿರುತ್ತಾನೆ; ಸುಮಾರು ಮೂವತ್ತು ವರುಷಗಳಾಗಿರಬೇಕು ಆವನ ಲೆಕ್ಕದ ಪ್ರಕಾರ, ನಮ್ಮ ಮಾವಂದಿರಿದ್ದಾಗ ದಾಜೀಬಾನಿಗೆ ಸಂಬಳ ಕೊಡುವವರು ಅವರು, ಆದರೆ ಈಗಿನ ಹೊಸ ಪದ್ಧತಿಗನುಸರಿಸಿ, ತ೦ದುಬಂದು ಹಾಕುವದಷ್ಟು ನಮ್ಮವರ ಕೆಲಸ; ಅದನ್ನು ಯೋಗ್ಯ ರೀತಿಯಲ್ಲಿ ವೆಚ್ಚ ಮಾಡುವದು, ಉಳಿಸುವದು, ಲೆಕ್ಕ ಹಚ್ಚಿಟ್ಟು ತಿಂಗಳಿಗೊಮ್ಮೆ ನೊಡುವದು, ಎಲ್ಲದರ ಭಾರವು ಸಂಪೂರ್ಣವಾಗಿ ನನ್ನ ಮೇಲೆ.