ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೮

ಹೂಬಿಸಿಲು

ರಿಚಿತರಿರಲಿ, ಅವರೊಡನೆ ತಾವು ತಮ್ಮವರೆ ಏನೋ ಅನ್ನುವಂತೆ ಮನಬಿಚ್ಚಿ ಹರಟೆ ಹೊಡೆಯುತ್ತ ಕುಳಿತುಕೊಳ್ಳುವದು-ಅದರಂತೆ ಆ೦ದು ನನ್ನ'ಅವರ 'ನ್ನೂ ಕರೆದೊಯ್ದರು ಭಾವಯ್ಯನವರು, ನನಗನಿಸಿತು ಅವರು ನನ್ನ ವಿಷಯವನ್ನೆ ಮಾತನಾಡುತ್ತಿರಬಹುದೆಂದು. ಏಕೆಂದರೆ, ಕನ್ಯೆಯನ್ನು ನೋಡಲು ಬಂದ ಹೊಸ ಅಳಿಯನೊಡನೆ ಇನ್ನೆನು ಮಾತನಾಡುವರು ? ಕೇಳಬೇಕೆಂಬ ಬಲವಾದ ಆತುರತೆಯಿಂದ ಮನಸು ಹಾತೊರೆಯಹತ್ತಿತು. ಮುಂಜಾನೆಯ ಹೊತ್ತಾದುದರಿಂದ ಎಲ್ಲರೂ ತಮ್ಮ ತಮ್ಮ ಕೆಲಸದಲ್ಲಿ ತೊಡಗಿದ್ದರು. ನಾನು ಮೆಲ್ಲಗೆ ನುಸುಳಿದವಳೇ ಅಟ್ಟವನ್ನೇರಿದೆ; ಕಾಣಲಿಲ್ಲ, ಕಿವಿಗೊಟ್ಟು ಕೇಳಿದೆ; ನನ್ನ ವಿಷಯವೇ ಇರಬೇಕೆನಿಸಿತು. ನಾನು ಕಿವಿಗೊಟ್ಟಾಗ ಭಾವಯ್ಯನವರೇ ಮಾತನಾಡುತ್ತಿದ್ದರು.

ಭಾವನವರು:-ಹೋಗುವ ಮೊದಲು ಬೇಕಾದರೆ ಇನ್ನೊಮ್ಮೆ ಪರೀಕ್ಷಿಸಬಹುದಲ್ಲವೇ ಚೆನ್ನಾಗಿ ?

(ನಾನು ಆಶ್ಚರ್ಯದಿಂದ, ಏನು ನನ್ನ ಪರೀಕ್ಷೆ ಇನ್ನೊಮ್ಮೆಯೆ? ಇನ್ನೂ ಏನೇನು ಉಳಿದಿದೆಯೋ ? ಎಂದುಕೊಂಡೆ.)

ಅವರು :-ನಿನ್ನೆ ನೋಡಿದಾಗಂತೂ ಬಲಗಣ್ಣು ಕುರುಡಾಗಿ ಕಂಡಿತು.

(ಏನು ? ನನ್ನ ಕಣ್ಣು ಕುರುಡೆ ? ನೋಡುವವರ ಕಣ್ಣುಗಳೇ ಕುರುಡಾಗಿರಬಹುದು! ಮನೋಹರವಾದ ನನ್ನ ಕಣ್ಣು ಕುರುಡಂತೆ ಕುರುಡು!)

ಭಾವನವರು :- ದೃಷ್ಟಿಯು ಚೆನ್ನಾಗಿದೆ; ಬೇಕಾದರೆ ಸಂಜೆಯಾದ ಮೇಲೆ ಓಡಾಡಿಸಿ ನೋಡಬಹುದು.

(ಇದೇನು ? ಅಂತೂ ದೃಷ್ಟಿಯು ಚೆನ್ನಾಗಿರುವದೆಂದು ಹೇಳುವಭರದಲ್ಲಿ ನನ್ನ ಕಣ್ಣು ಕುರುಡೆಂದು ಸಹಜವಾಗಿಯೇ ಒಪ್ಪಿದಂತಾಯಿತಲ್ಲ?)