ವಿಷಯಕ್ಕೆ ಹೋಗು

ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ನನ್ನನ್ನು ನೋಡಲಿಕ್ಕೆ ಬಂದಾಗ-
೬೩

ಮಾತಿಗೆ. ನನ್ನ ಭಾವೀ 'ಅವರ ' ಜೊತೆಯಲ್ಲಿಯೇ ನನ್ನ ವಿವಾಹವು ಬಹು ವಿಜೃಂಭಣೆಯಿಂದ ಜರುಗಿತು. ವಿಜೃಂಭಣೆ ಎಂದೇಕೆ ಅನ್ನುವೆನೆಂದರೆ, ದೈವುಳ್ಳವರ ಮನೆಯ ಮದುವೆ-ಮುಂಜಿಗಳಲ್ಲಿ ಬರಬಹುದಾದ ಯಾವ ಬಗೆಯ ನ್ಯಾಯ-ನಿಗದಿಗಳೂ ಇಲ್ಲದೆ ಮದುವೆಯಾಯಿತು. ಬಡತನದಿಂದಾದರೂ ಬಹು ಸಮಾಧಾನಕರವಾಗಿ ಆಯಿತು. ತೃಪ್ತಿ-ಸುಖ- ಸಮಾಧಾನಗಳಿಗಿಂತ ಮಿಗಿಲಾದ ವಿಜೃಂಭಣೆಯು ಈ ಜಗತ್ತಿನ ಸಂಸಾರದಲ್ಲಿ ಇನ್ನಾವದಿದೆ?

ಮುಂದೆ ಸ್ವಲ್ಪ ಕಾಲಾವಧಿಯಲ್ಲಿಯೇ, ನಾನು, ನನ್ನವರಿಗೆ ಕಾರವಾರಕ್ಕೆ ಚಾಕರಿಯಿದ್ದುದರಿಂದ, ಅಲ್ಲಿಗೆ ತೆರಳಬೇಕಾಯಿತು. ಅವರ ಪ್ರೇಮವು ನನ್ನ ಮೇಲೆ ಅಷ್ಟಿಷ್ಟೆಂದು ಹೇಳಲಾಗದು. ಅವರಿಂದ ನನಗೆ ಸುಖ ಅಷ್ಟಿಷ್ಟಿರಲಿಲ್ಲ; ಆದರೂ ನನ್ನನ್ನು ನೋಡಲಿಕ್ಕೆ ಬಂದಾಗ ಅವರು ನನ್ನ ಮೇಲಿಟ್ಟ ಕುಂದು ನೆನೆದು ಕೊರಗುತ್ತಲೇ ಇದ್ದೆನು. ಹೀಗಿರುವಾಗ ಒಂದು ದಿನ ನಾವಿಬ್ಬರೇ ನಮ್ಮ ಸ್ವಂತದ 'ಕಾರಿ' ನಲ್ಲಿ ಸಾಯಂಕಾಲಕ್ಕೆ ತಿರುಗಾಡಲಿಕ್ಕೆಂದು ಸಮುದ್ರ ತೀರಕ್ಕೆ ಹೊರಟೆವು. ಆಗಂತೂ ನನಗೆ ಪಂಢರಪುರದೊಳಗಿನ ಆ ಆಗಬಹುದಾಗಿದ್ದ ಸವತಿಯ ನೆನಪಾಯಿತು; ಹಠಾತ್ತಾಗಿ ನೆನಪಾ-ಪಾಯಿತು! ಜನರ ಗಲಾಟೆಯಿಲ್ಲದ ರಮ್ಯ ಸ್ಥಳದಲ್ಲಿ, ಒಂದು ಗಿಡದ ಬುಡದಲ್ಲಿ ಇರುವ ಒಂದು ಸಣ್ಣ ಬಂಡೆಗಲ್ಲ ಮೇಲೆ ಹೋಗಿ ಕುಳಿತೆವು. ಆಗ ಅವರೊಬ್ಬರೇ ಇದ್ದುದನ್ನು ನೋಡಿದಾಗಂತೂ ನನ್ನ ದುಃಖವು ಇನ್ನಿಷ್ಟು ಉಮ್ಮಳಿಸಿ ಹೊರಚಿಮ್ಮಿತು; ಅದರೊಡನೆ ಉದ್ವೇಗವೂ ಹೆಚ್ಚಾಯಿತು. ಹೇಗಾದರೂ ಮಾಡಿ ಆ ಮಾತನ್ನು ಒರೆಗೆ ಹಚ್ಚಿಯೇ ತೀರಬೇಕು, ಅ೦ತಹ ಕುರುಡಿ- ಕುಂಟಿಯನ್ನು ಹೇಗೆ ಮದುವೆಯಾದರೆಂಬ ಮಾತನ್ನೂ ಅವರಿಗೆ ಹಂಗಿಸಿ ಬಿಡಬೇಕೆಂದು ದೃಢ ನಿಶ್ಚಯ ಮಾಡಿದೆನು; ಆದರೆ ಕೇಳಲು ಧೈರ್ಯ ಸಾಲದು. ಕೈಕಾಲು ನಡುಗಹತ್ತಿದವು; ಮುಖವು ಕಪ್ಪಿಟ್ಟಿತು; ಕಣ್ಣಲ್ಲಿ ನೀರು ತುಂಬಿತು.