ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕರುಳ ಕತ್ತರಿ

೬೯

ಬಳಗಕ್ಕೆಲ್ಲಾ ಬೇಕಾಗಿದ್ದೇನಿ, ಹ್ಯಾಂಗ ಅವರೆಲ್ಲಾರ್ನೂ ಬಿಟ್ಟು ಬರ್ಲೆಪ್ಪಾ? ಅವರೆಲ್ಲಾರ್ದೂ ಏನಾರ ತಪ್ಪು ತಿಳುವಳಿಕ್ಯಾದ್ರ ಏನ ಮಾಡಲಿ? .......ಹ್ಯಾಂಗ ಮಾಡಿದರ ಈ ಮಾತು ಬಗೀ ಹರಿದೀತು?"

"ಹೌದವ್ವಾ, ಅದೂ ಖರೇನ. ನಾಲ್ಕೊಪ್ಪತ್ತು ಅನ್ನಾ ಹಾಕಿ ಸಾಕಿದಾಂವಾ, ಅವನ ಬಳಗಾ ಇದ ಹೆಚ್ಚಾತಲ್ಲ ನಿನಗ? ಒಂಭತ್ತು ತಿಂಗಳು ಹೊತ್ತು ಕಷ್ಟಪಟ್ಟ ನಿನ್ನ ತಾಯೀದೂ, ಭಿಕ್ಷಾ ಬೇಡ್ಯಾದ್ರೂ ಹೊಟ್ಟಿಗೆ ಹಾಕಿದ ನಿನ್ನ ತಂದೀದೂ ಈಗ ನಿನಗ ಹ್ಯಾಂಗ ನೆನಪಾದೀತವ್ವಾ?...

"ಅಪ್ಪಾ, ಒಮ್ಮೆಲೇ ಸುಮ್ಮಸುಮ್ಮನ ಸಿಟ್ಟಾಗಬ್ಯಾಡಾ, ಬಾಗಲಾ ನುಗಿಸಿದ್‌ಹಾಂಗಾತೂ, ಬಂದ್ರು ಕಾಣಸ್ತದ, ನೀ ಮಲಗೇಳು, ಹೋಗು. ನಾಲ್ಕು ದಿವಸಾ ಇರು, ಅವರ್ನ ಕೇಳಿ ಪರವಾನಗೀ ತಗೊಂಡು ಬರ್‍ತೇನಂತ,,....ವಿಚಾರಾನರ ಮಾಡಬ್ಯಾಡಾ? ಅವ್ವಾ ಅವರ ಕಿವಿಗೆ ಸುದ್ದಾ ಈ ಮಾತು ಒಗಿಯದ ಹೊರಟಿದ್ದು ಬರೋದು ನನ್ನ ಮನಸಿನೊಳಗಿಲ್ಲಾ......." ಎಂದು ಸ್ಪಷ್ಟವಾಗಿ ಉತ್ತರ ಕೊಟ್ಟಳು.

ಮುದುಕನು ಒಳಗೆ ಹೋಗಿ ಮಲಗಿಕೊಂಡೆನು. ಮುಂದೆ ತಾಸೆರಡು ತಾಸುಗಳ ವರೆಗೆ ಚಂದ್ರವ್ವನ ಗಾಯನ-ವಾದನ ನಡೆದಿದ್ದವು.

****

ನಮ್ಮೂರ ಜಯಶ್ರೀ ಟಾಕೀಜದೆದುರಿಗೆ "ಭಾರೀ ಶೇಂಗ್ದಾಣಿ"ಗಳನ್ನು ಮಾರುತ್ತಿದ್ದ ಬಣಗಾರ ಗದಿಗೆಪ್ಪನು ಆಬಾಲವೃದ್ಧ ಸ್ತ್ರೀ ಪುರುಷರಿಗೆಲ್ಲರಿಗೂ ಒಳ್ಳೆಯ ಪರಿಚಿತನು! ಮೊದಮೊದಲು ಮೂರುನಾಲ್ಕು ಮಕ್ಕಳ ತಂದೆಯಾಗುವವರೆಗೂ ಅವನು ದುಡಿಯುತ್ತಿರಲಿಲ್ಲ; ದುಡಿದರೂ, ಮನೆಗೆ ತರುತ್ತಿದ್ದಿಲ್ಲ. ಅತ್ತಿಂದತ್ತಲೇ ಕರೇ ನೀರಿಗೆ ಹಾಳುಮಾಡಿ ಜೋಲೀ ಹೊಡೆಯುತ್ತ ಸಾಯಂಕಾಲ ಮನಿಗೆ ಬರುತ್ತಿದ್ದನು.