ಸುತ್ತುಮುತ್ತಲಿನ ಪೇಟೆಯೂರುಗಳಿಗೆ ಓಡಿಸಿ, ಧರ್ಮಾರ್ಥವಾಗಿ ಅವರಿಗೆ ಬೇಡವಾದ ಪುಸ್ತಕ ಪತ್ರಿಕೆಗಳನ್ನು ತರಿಸಿ ಇಟ್ಟರು. ಶಕ್ಯವಿದ್ದಷ್ಟು ಶ್ರಮವಹಿಸಿ, ಬಾಂಬೂಗೌಡ ಹೆಡ್‌ಮಾಸ್ತರರು ತಮ್ಮ- ಹಳ್ಳಿಯ ಜನರ ಹಿತದ ಸಲುವಾಗಿ ಮನಸಾರೆ ಹೆಣಗಾಡಹತ್ತಿದರು. ಮುಂದೆ ಕೆಲದಿನಗಳಲ್ಲಿ ಏ-ಬೀ-ಸೀ-ಡೀ ಸುರುಮಾಡಿಸಿಬಿಟ್ಟರು.
ಇತ್ತ ನಾನು ಅದೇ ನನ್ನ ಮ್ಯಾಟ್ರಿಕ್ ಪರೀಕ್ಷೆಯನ್ನು ಮುಗಿಸಿ ದಣಿದದ್ದರಿಂದ, ಹಳ್ಳಿಯಲ್ಲಿಯೇ ನನ್ನ ಮೇ ತಿಂಗಳ ಸೂಟಿಯನ್ನು ಆನಂದದಿಂದ ಕಳೆಯಬೇಕೆಂದು ಬಂದಿದ್ದೆನು. ನಾನು ೪-೫ ವರುಷದವನಿರುವಾಗಲೇ ನನ್ನನ್ನು ನನ್ನ ಚಿಕ್ಕಪ್ಪನಲ್ಲಿ ಕಲಿಯಲಿಟ್ಟಿದ್ದರಿಂದ ನನಗೆ ಹಳ್ಳಿಯ ಸುದ್ದಿಯೇ ಗೊತ್ತಿರಲಿಲ್ಲ. ಬಂದ ಕೂಡಲೆ ಎಲ್ಲವನ್ನೂ ತಿಳಿದುಕೊಂಡೆನು. ನನ್ನನ್ನು ನೋಡಿ ಅಲ್ಲಿಯ ಜನರು, “ಆಯಿತು, ಇಂವಾ ಒಬ್ಬಾ೦ವಾ ನಮ್ಮ ಊರೂರಿಗೆ 'ಎಡ್ಡವದ್ದಾ ಭಾದಶಾ' ಆದ್ಹಾಂಗಾದಾ...." ಎಂದು ಗುಣುಗುಟ್ಟಿದರು.
ಬಾಂಬೂಗೌಡ ಹೆಡ್ ಮಾಸ್ತರು ನನ್ನನ್ನು ಒಳ್ಳೆಯ ಪ್ರೀತಿಯಿಂದ ತಮ್ಮ ಶಾಲೆಗೆ ಕರೆದೊಯ್ದು ಎಲ್ಲವನ್ನೂ ತೋರಿಸಿದರು. ಅಷ್ಟು ಸಣ್ಣ ಹಳ್ಳಿಯ ಸಲುವಾಗಿ, ತಕ್ಕ ಮಟ್ಟಿಗೆ ಕಲಿತಂಥ ಮುದುಕರಾದ ಅವರು ಹೆಣಗಾಡುವದನ್ನು ನೋಡಿ ನನಗೆ ಬಹಳೇ ಆನಂದವಾಯಿತು; ನನ್ನ ಸಲುವಾಗಿ ಚಹಾದ ಸ್ಪೆಶಲ್ ವ್ಯವಸ್ಥೆಯನ್ನು ಏರ್ಪಡಿಸಿದ್ದರು. ಚಹ ಕುಡಿಯುವಾಗ, ತಾವು ತಮ್ಮೂರಿನ ಸಲುವಾಗಿ ಇನ್ನೂ ಒಂದು ಹೊಸದಾದ ವಿಚಾರವನ್ನು ತಲೆಯಲ್ಲಿ ಹಾಕಿಕೊಂಡಿದ್ದರೆಂದು ಹೇಳಿದರು. ಒಂದು ಚಿಕ್ಕ ಹ್ಯಾಂಡ್-ಪ್ರೆಸ್ ತ೦ದು ಕೇವಲ ನೂರು ಪ್ರತಿಗಳ ಒಂದು ದೈನಿಕ ಹೊರಡಿಸುವದು. ಐವತ್ತು ಪ್ರತಿಗಳು ಊರಲ್ಲಿ ಹಂಚಲಿಕ್ಕೆ, ಇಪ್ಪತ್ತೈದು Excchange ಗಾಗಿ, ಇಪ್ಪತ್ತೈದು ತಮಗೆ ಈಗಾಗಲೆ ಸಹಾಯ ನೀಡುತ್ತಿದ್ದ ನೆರೆಹೊರೆಯೂರಿನವರಿಗೆ. ಹೀಗೆ ಮಾಡಿದರೆ, ದೂರದೂರದ ಸುದ್ದಿಯು ಜನರಿಗೆ ತಿಳಿದು, ಅವರು