ಪುಟ:27-Ghuntigalalli.pdf/೧೨

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

೨೭ ಘಂಟೆಗಳಲ್ಲಿಬೆಳಿಗ್ಗೆ ಎಂಟೂಕಾಲು ಘಂಟೆಯಾಗಿತ್ತು. ಪೂನಾ ಎಕ್ಸ್‌ಪ್ರೆಸ್‌ ಗಾಡಿಯು ಮದ್ರಾಸ್ ಸೆಂಟ್ರಲ್ ಸ್ಟೇಷನ್ನಿನಿಂದ ಕದಲಲು ಇನ್ನೇನು ಎರಡು ಮೂರು ನಿಮಿಷಗಳು ಮಾತ್ರವೇ ಉಳಿದಿದ್ದವು. ಗಿರೀಶನು ಅವಸರವಸರವಾಗಿ ಕೂಲಿಯವನಿಂದ ತನ್ನ ಹೋಲ್ಡಾಲ್, ಸ್ಕೂಟ್‌ಕೇಸ್, ಹಣ್ಣಿನಬುಟ್ಟಿ, ನೀರಿನ ಕೂಜ ಇವುಗಳನ್ನು ಹೊರಿಸಿಕೊಂಡು 'ಸೆಕೆಂಡ್‌ಕ್ಲಾಸ್ ಕಂಪಾರ್ಟ್‌ಮೆಂಟ'ನ್ನು ರೈಲಿನ ಒಂದು ಕೊನೆಯಿಂದ ಹುಡುಕಿಕೊಂಡು ಬೇಗಬೇಗನೆ ನಡೆದ, ಅವನಿಗೆ ಮೊದಲು ಸಿಕ್ಕಿದ ಮೂರು ಕಂಪಾರ್ಟ್‌ಮೆಂಟುಗಳ ಪೈಕಿ ಒಂದರಲ್ಲಿ ಪರಂಗಿಯವರಿದ್ದರು; ಮತ್ತೊಂದು ಕೇವಲ ಇಬ್ಬರಿಗೆ ಮಾತ್ರ ಜಾಗ ಒದಗಿಸಲ್ಪಟ್ಟಿದ ಕಂಪಾರ್ಟ್‌ಮೆಂಟು. ಅದರಲ್ಲಿ ಒಂದು 'ಬರ್ತ್' ಖಾಲಿ ಇತ್ತು. ಇನ್ನೊ೦ದು 'ಬರ್ತ'ನ್ನು ತರುಣ ದಂಪತಿಗಳು ಆಕ್ರಮಿಸಿಕೊಂಡಿದ್ದರು. ಅಲ್ಲಿ ಕೂಡಲು ಮನಸ್ಕೊಪ್ಪದೆ ಗಿರೀಶನು ಮುಂದಿನ ಕಂಪಾರ್ಟ್‌ಮೆಂಟಗೆ ಹೋದ. ಅದು ಭರ್ತಿಯಾಗಿ ಹೋಗಿದ್ದುದರಿಂದ ಇನ್ನೂ ಮುಂದೆ ಹೊರಡುವುದರಲ್ಲಿದ್ದನು. ಆದರೆ ಕೂಲಿಯವನು - 'ಪೋದಾಚಿ; ಇಂಗೆಯೇ ವಾ ದೊರೆ' ಎಂದು ಅವಸರದಲ್ಲಿ ಎರಡನೆಯ ಚಿಕ್ಕ ಕಂಪಾರ್ಟ್‌ಮೆಂಟಿಗೇ ಸಾಮಾನುಗಳನ್ನಿರಿಸಿಬಿಟ್ಟ. ಆ ವೇಳೆಗೆ ಗಾರ್ಡು ಶೀಟಿ ಹಾಕಲು ಗಿರೀಶನು ಬೇರೆ ಮಾರ್ಗವೇ ಇಲ್ಲದೆ ಕೂಲಿಯವನ ಸಲಹೆಯನ್ನೇ ಅ೦ಗೀಕರಿಸಬೇಕಾಯಿತು. ಅವನು ಗಾಡಿ ಹತ್ತುವುದಕ್ಕೂ ರೈಲು ಕದಲುವುದಕ್ಕೂ ಸರಿಹೋಯಿತು.

ಆ 'ಕಂಪಾರ್ಟ್‌ಮೆಂಟ'ನಲ್ಲಿ ಮೊದಲೇ ಕುಳಿತಿದ್ದ ತರುಣ-ತರುಣಿಯರು ಒಂದು ಕ್ಷಣ ಗಿರೀಶನ ಮೇಲೆ ದೃಷ್ಟಿ ಬೀರಿದರು.

2