ಪುಟ:AAHVANA.pdf/೩೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


               ಆಹ್ವಾನ                

ಆದರೆ ನಮ್ಮ ಪುಣ್ಯದಿಂದ, ಆ ನಾಟಕದ ಇನ್ನೊಂದು ಅಂಶ ನಿಜವಾಗಲಿಲ್ಲ; ಸ್ವಾತಂತ್ರ್ಯದ ಹರಣವಾಗಲಿಲ್ಲ.

ಬದಲು, ವಿಶೇಷ ಘಟನೆಯೊಂದು ಸಂಭವಿಸಿತು. ಮಿಸುನಿಜಿಂಕೆಯಾಗಿದ್ದ ರಾಷ್ಟ್ರೀಯ ಭಾವೈಕ್ಯ, ವೈರಿಗಳು ಈ ನೆಅದ ಮೇಲೆ ಕಾಲಿರಿಸಿದ ಕೆಲವೇ ದಿನಗಳಲ್ಲಿ ಕರಗತವಾಯಿತು. ಏಕಪುರುಷನಂತೆ ಭಾರತ ಎದ್ದು ನಿಂತ ದೃಶ್ಯ ಕಂಡು ಲೋಕವೇ ಬೆರಗಾಯಿತು. ಪ್ರಜಾಕೋಟಿ ತೋರದ ಧೀರತೆ, ಆತ್ಮ ವಿಶ್ವಾಸ, ಉತ್ಸಾಹಗಳು ಅಭೂತಪೂರ್ವನಾಗಿದ್ದುವು.

ಆದರೆ ನಮ್ಮ ದುರದೃಷ್ಟ__ಆ ಭವ್ಯ ದೃಶ್ಯ ಆಲ್ಪಾಯುವಾಗಬೇಕೆ! ಮಿಂಚಿ ಮಾಯವಾಗಬೇಕೆ!

ರಣರಂಗದಲ್ಲಿ ಪರಾಜಿತರಾಗದೆ ಇದ್ದರೂ ಚೀಣಿಯರು ಇಲ್ಲಿಂದ ಕಾಲ್ತೆಗೆದರು. ಯಾಕೆ ಎಂಬುದೊಂದು ಚೀಣೀ ಒಗಟು. ಅನಾದೃಶವಾದ ರಾಷ್ಟ್ರಿಯ ಐಕ್ಯವೂ ಆ ಕಾರಣಗಳಲ್ಲಿ ಒಂದು ಎಂಬುದು ಸ್ಪಷ್ಟ. ಆದರೆ ಈ ಐಕ್ಯ, ಚೀಣೀ ಆಕ್ರಾಣಕಾರರೊಡನೆ ಕಣ್ಣುಮುಚ್ಚಾಲೆಯಾಡಿತು! ಅವರು ತೆರಳಿದೊಡನೆಯೇ ಇದು ಕಣ್ಮರೆಯಾಯಿತು!

ಈಗ ಮತ್ತೆ, ಚೀಣೀ ಆಕ್ರಮಣದ ಪೂರ್ವದ ಸ್ಥಿತಿಗೇ ಮರಳಿದ್ದೇವೆ. ಜಾತಿ__ಮತಗಳಿಗಾಗಿ, ಸ್ಥಾನ ಪದವಿಗಳಿಗಾಗಿ, ನೀರು ಭಾಷೆಗಳಿಗಾಗಿ ಭಾರತದೊಳಗೆ ಆಂತರಿಕ ಹೋರಾಟ ನಡೆದಿದೆ. ರಕ್ಷಣೆಯ ಚೌಕಟ್ಟು; ಅದರೊಳಗೆ ನವಭಾರತದ ಚಿತ್ರನಿರ್ಮಾಣ. ಶತಮಾನಗಳಿಂದ ಹಸಿದಿದ್ದುವೇನೋ ಎಂಬಂತೆ ಹಸಿಬಣ್ಣಗಳನ್ನೇ ಕಬಳಿಸುತ್ತಿರುವ ಗೆದ್ದಲು ಹುಳುಗಳು. ಚೀಣೀಯರು ಬಂದುದ್ಗಲೀ, ರಾಷ್ಟ್ರಪುರುಷನ ಪ್ರತಿಭಟನೆಯ ಠೇಂಕಾರ ಗಗನಭೇದಕವಾದುದಾಗಲೀ ಯಾವುದೋ ಕ್ಷಣದ ಕನಸು ಎನ್ನುವಂತೆ, ಪರಸ್ಪರರ ಮೇಲೆ ಕೆಸರೆರಚುವ ಓಕುಳಿಯಾಟದಲ್ಲಿ ಭಾರತದ ಮಕ್ಕಳೀಗ ನಿರತರಾಗಿದ್ದಾರೆ.