ಪುಟ:Abhaya.pdf/೧೯೮

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ
೧೯೩
ಅಭಯ

ತಂದೆ ಆಕೆಯನ್ನು ನೋಡಿದರು ತಮ್ಮನೂ ಕೂಡಾ. ನಿನ್ನ ವಿಷಯ ಆಗಲೆ ಕೇಳಿ ತಿಳಿದಿದೇವೆ-ಎನ್ನುತಿದ್ದುವು ಆ ದೃಷ್ಟಿಗಳು.
"ಬೆಳಿಗ್ಗೇನೆ ನೋಡಿದೀನಿ ಅವಳ್ನ," ಎಂದರು ತಂದೆ; "ಏನಮ್ಮ ಜಲಜ, ಚೆನ್ನಾಗಿದೀಯಾ?"
"ಇದೀನಿ ಸಾರ್."
ತನ್ನನ್ನು ಮಾತನಾಡಿಸಿದರೆಂದು ಎಷ್ಟೊಂದು ಹೆಮ್ಮೆಯಿತ್ತು ಆ ಧ್ವನಿಯಲ್ಲಿ!
ತುಂಗಮ್ಮನ ತಂದೆ, ತಮ್ಮ ಪುಟ್ಟ ಕೈ ಚೀಲವನ್ನೆತ್ತಿಕೊಂಡು, ಮಗನ ಕೈಯನ್ನೂ ಹಿಡಿದು, ಹೊರಡಲು ಸಿದ್ದರಾದರು.
"ನಮಗಿನ್ನು ಅಪ್ಪಣೆಕೊಡಿ....ನನ್ನದಿಷ್ಟೇ ಪ್ರಾರ್ಥನೆ. ನಿಮ್ಮನ್ನ ದೊಡ್ಡಮ್ಮ ಅಂತ ಕರೆಯೋದು ಇಲ್ಲಿನ ಪದ್ದತಿಯಂತೆ. ತುಂಗನೂ ನಿಮ್ಮನ್ನ ದೊಡ್ಡಮ್ಮ ಅಂತ್ಲೇ ಕೂಗ್ತಾಳೆ. ಆಕೆ ತಾಯಿ ಇಲ್ಲದ ತಬ್ಬಲಿ. ದಯವಿಟ್ಟು ನೋಡ್ಕೊಳ್ಳಿ ನೀವೇ ಅವಳ ವಾಲಿನ ನಿಜವಾದ ದೊಡ್ಡಮ್ಮ....ಇನ್ನೇನು ಹೇಳ್ಲಿ?"
ಹೆಚ್ಚು ಮಾತುಗಳನ್ನಾಡದೆ ಸರಸಮ್ಮನೆಂದರು:
"ಆಗಲಿ....ಹೋಗ್ಬನ್ನಿ. ..ದೇವರಿದ್ದಾನೆ."
ಬೀಳ್ಕೊಡುವ ಕೊನೆಯ ನಿಮಿಷ....
ಮಾರ್ಕೆಟಿನವರೆಗೂ ನಡೆದುಹೋಗುವೆವೆಂದು ಹೊರಟ ತಂದೆ ಮತ್ತು ಮಗನನ್ನು ಕಳುಹಿಕೊಡಲು, ದೊಡ್ಡಮ್ಮ, ತುಂಗಮ್ಮ ಮತ್ತು ಜಲಜ ಕಿರುಗೇಟಿನವರೆಗೂ ಬಂದರು ನಿಶ್ಚಲ ಮುಖಮುದ್ರೆಯ ಲಲಿತಾ ಬಾಗಿಲಿಗಡ್ಡವಾಗಿ ನಿಂತಿದ್ದಳು ದ್ವಾರಪಾಲಕಿಯಾಗಿ. ಅಭಯಧಾಮದ ಹುಡುಗಿಯರೆಲ್ಲ ಆಕೆಯ ಹಿಂದೆ ನಿಂತುಕೊಂಡು ಕುತೂಹಲದಿಂದ, ವಯಸ್ಸಾದ ಆ ಒಬ್ಬ ಗಂಡಸು ಪುಟ್ಟ ಹುಡುಗನೊಡನೆ ನಡೆದು ಹೋಗುತಿದ್ದುವನ್ನು ನೋಡಿದರು.
ತಂದೆ ಮತ್ತು ತಮ್ಮ ಹೊರಟು ಹೋದೆ ಮೇಲೆ ತುಂಗಮ್ಮನಿಗೆ ಎಲ್ಲವೂ ಶೂನ್ಯವಾದಂತೆ ತೋರಿತು.

೧೩