ಪುಟ:Abhaya.pdf/೨೦೦

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

ಹುಚ್ಚಿಗೆ, ಎರಡುನಿಮಿಷ ಮೌನವಾಗಿರಬೇಕೆಂದು ತೋರಿತು-ಎರಡು ನಿಮಿಷ ಮಾತ್ರ. "ನಿಮ್ಮ ತಂದೆ ಒಳ್ಳೆಯೋರು, ಅಲ್ವ ತುಂಗಕ್ಕ ?" ಗಂಟಲು ಕಟ್ಟಿಕೊಂಡಿತ್ತು ತುಂಗಮ್ಮನಿಗೆ ಆಕೆ ಉತ್ತರನೀಯಲಿಲ್ಲ ಕುಳಿತಿದ್ದ ಚುವೆಯಲ್ಲೆ ತುಂಗಮ್ಮನ ತೊಡೆಯಮೇಲೆ ತಲೆ ಇರಿಸಿ, ಮೈ ಮುದುಡಿಸಿ, ಆಕೆ ಮಲಗಿಕೊಂಡಳು ? ಆ ಸಂಜೆ ಸರಸಮ್ಮನೂ ಉಲ್ಲಾಸವಾಗಿದ್ದರು. ಹುಡುಗಿಯರೊಡನೆ ತಾವೂ ಹೂವಿನ ಗಿಡಗಳಿಗೆ ವಾತಿಗಳಿಗೆ ನೀರೆರೆದರು. ಕತ್ತಲಾದಾಗ ಭಜನೆಯಾಯಿತು. ವರ್ಷವೆಲ್ಲಾ ದಿನಗಳು ಹೀಗೆಯೇ ಇರಬಾರದೆ-ಎನಿಸಿತು ಸರಸಮ್ಮನಿಗೆ-ಅವರು, ಜಲಜ-ಲಲಿತ-ಸಾವಿತ್ರಿಯರನ್ನು, ಸುಂದ್ರಾ-ಕಲ್ಯಾಣಿಯರನ್ನು, ತಮ್ಮ ಆಫೀಸು ಕೊಠಡಿಗೆ ಕರೆಸಿ ರವಕೆ ಕಣಗಳನ್ನು ಕೊಟ್ಟರು. ಮೂಗಿ ತನಗೆ ಅರ್ಥವಾಯಿತೆಂದು ಸನ್ನೆಮಾಡಿದಳು: "ಯಾಕ್ರನ್ವಾ ಇದು" "ತುಂಗಮ್ನ ತಂದೆ ಬಂದಿದ್ರು ನೋಡು-" "ಊಂ. ಅಂಗೇಂತ ಅಂದ್ಲು ವಾರೋತಿ" "ಅವರ್‍ಕೊಟ್ಟದ್ದು" "ತುಂಗಕ್ಕ ಕೊಡಿಸಿದ್ಲೂ ಅನ್ನಿ!" ಕುರುಡಿಯ ಕೈ ಬೆರಳು, ರವಕೆ ಕಣದ ಮೇಲಿನ ಹೂವಿನ ಚಿತ್ರಗಳನ್ನು ಬಟ್ಟೆಯಿಂದ ಬೇರೆಯಾಗಿಯೆ ಗುರುತಿಸಲು ಯತ್ನಿಸುತಿತ್ತು. ಅದಾದ ಮೇಲೆ ಸರಸಮ್ಮ, ಎಲ್ಲ ಹುಡುಗಿಯರನ್ನೂ ಒಬ್ಬೊಬ್ಬರಾಗಿ ಕರೆದು ಒಂದು ಕಿತ್ತಳೆ ಹಣ್ಣು-ಎರಡೆರಡು ಬಿಸ್ಕತ್ತು ಕೊಟ್ಟರು. ಒಬ್ಬಳು ಹುಡುಗಿ ಮಾತ್ರ ಎರಡನೆಯ ಬಾರಿ ಪಡೆಯಲೆತ್ನಿಸಿ ಸಿಕ್ಕಿಬಿದ್ದಳು. ತುಂಗಮ್ಮ ಗದರಿಸಲಿಲ್ಲ. "ಕೆಟ್ಟ ಹುಡುಗಿ!" ಎಂದು ನಗುತ್ತ ಛೀಮಾರಿ ಹಾಕಿ ಹಾಕಿ ಹಾಗೆಯೇ ಓಡಿಸಿದರು