ಪುಟ:Abhaya.pdf/೨೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೧೬ ಅಭಯ

ತಿದ್ದ ಆಭರಣಗಳೆಂದರೆ, ರೋಗ, ಕೆಟ್ಟ ಚಾಳಿ ಮತ್ತು ಅವಿದ್ಯೆ. ಆ ಮೇಟ್ರನ್‌ ಅವರಿಗೆ ಹೊಡೆದು ಬುದ್ಧಿ ಕಲಿಸುತಿದ್ದರು. ತಮ್ಮ ಕೈ ಸೋತಾಗ, ಪೋಲೀಸರನ್ನು ಕರೆಸಿ ಹೊಡೆಸುತಿದ್ದರು

ಆಗ ಸಹಾಯಿಕೆಯಾಗಿ ಬಂದ ಒಬ್ಬರಂತೂ ಒಂದು ವಾರವೂ ಇರಲಿಲ್ಲ. ಒಬ್ಬ ಹುಡುಗಿ ಅಧ್ಯಾಪಿಕೆಯ ಮುದ್ದಾಗಿದ್ದ ಕೈಯನ್ನು ಕಚ್ಚಿ, ಬಾಯಿ ತುಂಬ ಮಾಂಸ ಕಿತ್ತುಬಿಟ್ಟಳು. ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಮಾಡಿಸಿಕೊಂಡ ಅವರು ಮತ್ತೆ ಅಭಯಧಾಮದತ್ತ ಮುಖ ತೋರಿಸಲಿಲ್ಲ.

ಆ ಮೇಲೆ ಸರಸಮ್ಮ ಸಹಾಯಿಕೆಯಾಗಿ ಅಭಯಧಾಮ ಸೇರಿದರು. ಸಮಾಜ ಸೇವಿಕೆಯಾಗಬೇಕೆಂಬ ಅವರ ಪ್ರಬಲಾಕಾಂಕ್ಷೆ ಒಂದು ತಿಂಗಳಲ್ಲೆ ಕರಗಿ ಹೋಯಿತು. ಆ ಜೀವನ ಅವರಿಗೆ ಬೇಸರವಾಯಿತು.

ಹೀಗೆ ಅರೆಮನಸ್ಸಿನಿಂದ ಅವರು ದಿನಕಳೆಯುತಿದ್ದಾಗಲೇ, ಮೇಟ್ರನ್‌ ಪದವಿಯನ್ನೇ ಆಕೆ ನಿರ್ವಹಿಸಬೇಕಾದ ಪ್ರಮೇಯ ಒದಗಿ ಬಂತು. ಅಲ್ಲಿದ್ದ ಒಬ್ಬಿಬ್ಬರು ಹುಡುಗಿಯರನ್ನೆ ಅವಲಂಬಿಸಿಕೊಂಡು, ಗಟ್ಟಿ ಮನಸ್ಸು ಮಾಡಿ, ಸರಸಮ್ಮ ಉಳಿದರು

ವರುಷ ವರುಷಗಳು ಸಂದುವು ಆ ಮೇಲೆ. ಸಂಸ್ಥೆ ಬೆಳೆಯಿತು. ಹೊಸ ಕಟ್ಟಡ ಬಂತು. ವಿಧವಿಧದ ಮಾನವ ಜೀವಿಗಳನ್ನು ಸೂಕ್ಷ್ಮವಾಗಿ ನಿರೀಕ್ಷಿಸಿ ಪರೀಕ್ಷಿಸಿ ಸರಸಮ್ಮ ಮನಃಶಾಸ್ತ್ರ ಪಾರಂಗತೆಯಾದರು.

ಒಳಗೆ ಸಣ್ಣ ಪುಟ್ಟ ಕಳ್ಳತನಗಳಾಗುತಿದ್ದುವು.

ಒಮ್ಮೆ ಸರಸಮ್ಮನ ಕೈ ಗಡಿಯಾರ ಕಳವಾಯಿತು!

ಏನು ಮಾಡಬೇಕೆಂದು ತೋಚದೆ ದಿಗ್ಭ್ರಮೆಗೊಂಡು ಸರಸಮ್ಮ ತಮ್ಮ ಕೊಠಡಿಯಲ್ಲೆ ಅಸಹಾಯರಾಗಿ ಶತಪಥ ತುಳಿದರು.

“ಇರೋದೊಂದೇ ಮಾರ್ಗ. ಪೋಲೀಸರ್‍ನ ಕರಕೊಂಡ್ಬಂದು ಚೆನ್ನಾಗಿ ಪ್ರತಿಯೊಬ್ಬರಿಗೂ ನಾಲ್ಕೇಟು ಬಿಗಿಸಿ"

ಎಂದು ಮಗ್ಗ ಕಲಿಸಿಕೊಡಲು ಬರುತಿದ್ದ ನೇಕಾರ ಹೇಳಿದ.

ಸರಸಮ್ಮ ಆ ಕೆಲಸ ಮಾಡಲಿಲ್ಲ. ಆಗ ಅಭಯಧಾಮದಲ್ಲಿದ್ದವರು, ಆಕೆಯನ್ನೂ ಒಳಗೊಂಡು ಹದಿಮೂರೇ ಜನ. ಅವರಲ್ಲಿ, ಗಡಿಯಾರ ಯಾರು ಕದ್ದರು ?