ಪುಟ:Abhaya.pdf/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೨೮ ಅಭಯ

ಮತ್ತು ಇತರ ಹುಡುಗಿಯರು ನೇಯ್ಗೆಯ ಮಗ್ಗವಿದ್ದ ಮೂಲೆಯಲ್ಲಿ ಜಾಗ ಹಿಡಿದರು.

ಜಲಜೆ - ಲಲಿತೆಯರಾದರೂ ತನ್ನ ಬಳಿಯಲ್ಲಿ ಇರುತಿದ್ದರೆ - ಎಂದು ತುಂಗಮ್ಮ ಹಲುಬಿದಳು. ಆದರೆ ಅವರಿಬ್ಬರೂ ಆಗಲೆ ವಿದ್ಯಾವಂತೆಯರೆನ್ನಿಸಿ ಕೊಂಡು ಕತೆ ವುಸ್ತಗಳನ್ನು ಓದತೊಡಗಿದ್ದವರು. ಅವರು ತುಂಗಮ್ಮನ ತರಗತಿಗೆ ಬರುವ ಮಾತೇ ಇರಲಿಲ್ಲ.

ರಾಜಮ್ಮ ಮಾತ್ರ ಅಧಿಕಾರದ ಧ್ವನಿಯಲ್ಲಿ ಅಂದರು : "ಏನಾದರೂ ತಿಳೀದೆ ಹೋದ್ರೆ ನನ್ನ ಕೇಳಿ.”

ಆ ಬಹುವಚನದ ಸಂಬೋಧನೆಯಲ್ಲಿ ವ್ಯಂಗ್ಯ ಬೆರೆತಿತ್ತು. ಆದರೆ ತುಂಗಮ್ಮ ಆ ಅವಮಾನವನ್ನು ಗಮನಿಸಲಿಲ್ಲ.

ತುಂಗಮ್ಮ ತನ್ನ ವಿದ್ಯಾರ್ಥಿನಿಯರಿಗೆ ಎದುರಾಗಿ ಕುಳಿತಾಗ ಹುಡುಗಿ ಯರೆಲ್ಲ ಮುಸು ಮುಸು ನಕ್ಕರು ಸರಸಮ್ಮ, ತುಂಗಮ್ಮನ ನೆರವಿಗೆ ಬಂದರು

"ಎಲ್ಲರೂ ಏಳಿ !” ತುಂಗಮ್ಮನನ್ನು ಒಳಗೊಂಡು ಎಲ್ಲ ಹುಡುಗಿಯರೂ ಎದ್ದು ನಿಂತರು. ಒಬ್ಬರ ಕೈಯಲ್ಲಾದರೂ ಸ್ಲೇಟು ಕಡ್ಡಿ ಇರಲಿಲ್ಲ.

"ಯಾಕೆ ಬರಿಕೈಲಿದೀರಾ ?”

ಹುಡುಗಿಯರು ತೆಪ್ಪಗಿದ್ದರು ಆ ಮೌನಕ್ಕೆ ಅಪವಾದವಾಗಿ ಯಾರೋ ಕಿಸಕ್ಕನೆ ನಕ್ಕರು. ಒಬ್ಬಳು ಉತ್ತರ ಕೊಡುವ ಸಾಹಸ ಮಾಡಿದಳು: " ತುಂಗಮ್ನೋರ ಕ್ಲಾಸಿಗೆ ಸ್ಲೇಟುಕಡ್ಡಿ ಬೇಕಾಗುತ್ತೋ ಇಲ್ವೋಂತ ತರ್‍ಲಿಲ್ಲ ದೊಡ್ಡಮ್ಮ"

ಗದರಿಸಬೇಕೋ ನಕ್ಕು ಸಮ್ಮನಾಗಬೇಕೊ ಎಂದು ಒಂದು ಕ್ಷಣ ತಿಳಿಯದೆ ಸರಸಮ್ಮ ಮೌನವಾಗಿದ್ದರು. ಆ ಕ್ಷಣ ಮುಗಿದೊಡನೆ ಅವರು ನಕ್ಕು ನುಡಿದರು : " ಖಿಲಾಡಿಗಳು! ಹೋಗಿ! ಸ್ಲೇಟು-ಬಳಪ ತಗೊಂಡ್ಬನ್ನಿ ಎಲ್ರೂ !”

ಧಡಧಡನೆ ಹುಡುಗಿಯರು, ಚಾಪೆಗಳನ್ನು ಬಿಚ್ಚಿ ಇಟ್ಟಿದ್ದ ಜಾಗಕ್ಕೆ ಹೋಗಿ ಸ್ಲೇಟುಗಳನ್ನೆತ್ತಿಕೊಂಡರು.