ಪುಟ:Abhaya.pdf/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಅಭಯ ೨೩೭

ಮಾತನಾಡದೆಯೆ ಕುಳಿತಿದ್ದ ಕನಕಲಕ್ಷಮ್ಮ ಕೊನೆಗೆ ಅಂದಳು : "ನೀವು ಹೇಳಿದ ಹಾಗೆ ಮಾಡ್ತೀನಿ ದೊಡ್ಡಮ್ಮ.”

"ಅಯ್ಯೋ ಹುಚ್ಚಿ ! ಮದುವೆ ಮಾಡ್ಕೊಳ್ಳೋದು ನೀನು ಕಣೇ ನಾನಲ್ಲ."

".........."

“ ಹೋಗಲಿ ಈ ಸಂಬಂಧ ನಿನಗೆ ಒಪ್ಪಿಗೆಯೋ - ಅಷ್ಟು ಹೇಳು.” " ಹೂಂ....”

ಹಾಗೆ ಹೇಳಿ, ಹೊತ್ತಿದ್ದ ದೊಡ್ಡ ಭಾರವನ್ನು ಕೆಳಕ್ಕೆ ಇಳಿಸಿದ ಹಾಗಾಯಿತು ಕನಕಲಕ್ಷಮ್ಮನಿಗೆ. ತಾವು ಸಂಪಾದಿಸಿದ ಯಶಸ್ಸಿನಿಂದ ಸರಸಮ್ಮನ ಹೃದಯ ಹಗುರ ವಾಯಿತು.

ತುಂಗಮ್ಮನನ್ನು ಅವರು ಕರೆದು, ತಮಗೆ ಬಂದ ಕಾಗದದ ವಿಷಯ ವನ್ನೂ ಕನಕಲಕ್ಷಮ್ಮ ವಿವಾಹಕ್ಕೆ ಒಪ್ಪಿರುವುದನ್ನೂ ತಿಳಿಸಿದರು.

"ಈ ವಿಷಯ ಎಲ್ಲರಿಗೂ ಹೇಳೋ ದೊಡ್ಡಮ್ಮ?”

"ಈಗ್ಲೆ ಬೇಡ ತುಂಗ. ಸುಮ್ಸುಮ್ನೆ ಗೋಳು ಹೊಯ್ಕೋತಾರೆ ಆ ಹುಡುಗೀನ."

ಆದರೆ ಸರಸಮ್ಮನ ಅ೦ತಹ ಮುಂಜಾಗರೂಕತೆಯಿಂದ ಯಾವ ಪ್ರಯೋಜನವೂ ಆಗಲಿಲ್ಲ. ದೊಡ್ಡಮ್ಮ ಏಕಾಂತದಲ್ಲಿ ಕನಕಲಕ್ಷಮ್ಮನೊಡನೆ ಮಾತುಕತೆ ನಡೆಸಿದಾಗಲೇ ಉಹಾಪೋಹಗಳು ಆರಂಭವಾಗಿದ್ದುವು. ಕನಕಲಕ್ಷಮ್ಮ ಹೊರಬಂದಮೇಲೆ ಅಡುಗೆ ಮನೆಗೆ ಅವಳನ್ನು ಪುಸಲಾಯಿಸಿ ಒಯ್ದು ಹಲವು ಹುಡುಗಿಯರು ಆಕೆಯನ್ನು ಮುತ್ತಿಕೊಂಡರು.

"ಏನು ? ಅದೇನು ? ಹೇಳೆ - ಹೇಳು !” -ಎಂದು ಒಂದೇ ಸಮನೆ ಪೀಡಿಸಿ ಆಕೆ ಅಳುವಂತೆ ಮಾಡಿದರು. ಒಬ್ಬಳೆಂದಳು :

" ಗೊತ್ತಾಯ್ತು ಬಿಡು. ಮದುವೆ ! ಅದಕ್ಕೆ ಇಷ್ಟೊಂದು ಜಂಭ !” “ಮಹಾಬಲಪ್ಪ ಬತ್ತವ್ನೆ - ಹುಯ್ ! ” ಎಂದಳು ಇನ್ನೊಬ್ಬ ಹುಡುಗಿ.