ಪುಟ:Abhaya.pdf/೨೫೨

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

ಆ ಮಧ್ಯಾಹ್ನ ಸರಸಮ್ಮನಿಗೆ ಕಾರ್ಯದರ್ಶಿನಿಯಿಂದ ಅವಸರದ

ಕರೆಬಂತು.

"ಆದಷ್ಟು ಜಲ್ದಿ ಬರ್ಬೇಕಂತೆ"

-ಎಂದ, ಕರೆಯಲು ಬಂದಿದ್ದ ದೂತ.

ಏನೋ ವಿಶೇಷವಿರಬೇಕೆಂದು-ಎಂದುಕೊಂಡ ಸರಸಮ್ಮ. ತುಂಗಮ್ಮ
ನಿಗೂ ಹಾಗೆಯೇ ಹೇಳಿದರು.

ಬೇಗ ಬೇಗನೆ ಊಟ ಮುಗಿಸಿಕೊಂಡು, ಅಭಯಧಾಮದ ಉಸ್ತು
ವಾರಿಯನ್ನು ತುಂಗಮ್ಮನಿಗೆ ಒಪ್ಪಿಸಿ, ಸರಸಮ್ಮ ಹೊರಹೋದರು.

ಅವರು ಹಿಂತಿರುಗಿ ಬಂದಾಗ ಆಗಿನ್ನೂ ನಾಲ್ಕು ಘಂಟೆ. ಅಭಯಧಾಮ
ದಲ್ಲಿ ಸಂಗೀತದ ಪಾಠ ನಡೆಯುತಿತ್ತು ಬಾಗಿಲು ತೆರೆದು ಮುಚ್ಚಿದಬಳಿಕ
ದೊಡ್ಡಮ್ಮನೊಡನೆ ತುಂಗಮ್ಮನೂ ಆಫೀಸು ಕೊಠಡಿಗೆ ಬಂದಳು:

"ಒಂದು ವಿಷಯ ಹೇಳ್ತೀನಿ ಗೋನ್ಯವಾಗಿಡ್ಬೇಕು ತುಂಗ."

"ಹೂಂ."

"ಜಲಜ ಲಲಿತೆ ಯಾರಿಗೂ ಹೇಳ್ಕೂಡದು."

ಕಾತರತುಂಬಿದ್ದ ಧ್ವನಿ.....ಆತ್ಮೀಯ ಗೆಳತಿಯರಿಂದಲೂ ಮರೆ
ಮಾಡುವ ಕೆಲಸ ಅದು ತನ್ನಿಂದ ಸಾಧ್ಯವೆ? ಸಾಧ್ಯವೊ ಅಲ್ಲವೊ. ಆದರೆ
ದೊಡ್ಡಮ್ಮ ಹೇಳುತಿದ್ದಾರೆ. ತಾನು ಹಾಗೆ ಮಾಡಬೇಕು...

"ಹೂಂ. ದೊಡ್ಡಮ್ಮ."

"ಒಬ್ಬಳು ಗರ್ಭಿಣಿ ಹುಡುಗೀನ ಇವತ್ತು ಇಲ್ಲಿಗೆ ತರ್ತಾರೆ ರಾತ್ರೆ
ಹೊತ್ತು. ಆಕೆ ಯಾರು ಏನು ಅನ್ನೋದು ಒಬ್ಬರಿಗೂ ತಿಳೀಕೂಡದು.
ಆಕೇನ ಮಾತಾಡ್ಸೋಕೆ ಹೋಗಿ ಯಾರೂ ತೊಂದರೆ ಕೊಡಕೂಡದು."

ತುಂಗಮ್ಮನ ಎದೆ ಕ್ಷಣಕಾಲ ಗುಡುಗುಟ್ಟಿತು.

"ಹೂಂ."

"ದೊಡ್ಡ ಮನೆತನದ ಹುಡುಗಿ. ಏನೋ ಆಗ್ಬಿಟ್ಟಿದೆ. ಇಷ್ಟರವರೆಗೆ ಎಲ್ಲೋ ಇಟ್ಟಿದ್ರಂತೆ. ಇವತ್ತು ಇಲ್ಲಿಗೆ ಕರಕೊಂಡು ಬರ್ತಾರೆ."

"ಯಾವೂರೋ?"