ವಿಷಯಕ್ಕೆ ಹೋಗು

ಪುಟ:Chirasmarane-Niranjana.pdf/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೩೪
ಚಿರಸ್ಮರಣೆ

ಮುಜುಗರ ಮಾಡದೆ ತಗೋ" ಎಂದು ಚಿರುಕಂಡ ಒತ್ತಾಯಿಸಿದ್ದ. ಆದರೆ, ಗುಪ್ತವಾಗಿ ಬರುತ್ತಿದ್ದ ಮಾಸ್ತರರ ಸ್ನೇಹಿತರನ್ನು ಕರೆತರುವುದಕ್ಕೋ ಬಿಟ್ಟುಬರುವುದಕ್ಕೋ ರಾತ್ರೆ ಹೊತ್ತು ಹೊರಬಿದ್ದಾಗ, ಅಪ್ಪು ಚಪ್ಪಲಿ ಉಪಯೋಗಿಸುತ್ತಿರಲಿಲ್ಲ, ಸದ್ದಾಗಬಾರದೆಂದು.

ಪದೇ ಪದೇ ಅಪ್ಪು ಮಾಸ್ತರನ್ನು ಕೇಳುತ್ತಿದ್ದ:

"ಯಾವಾಗ ಸರ್‌ ಸಂಘ ಕಟ್ಟೋದು? ಯಾಕೆ ಸರ್‌ ತಡ?"

ಅವರು ಬಾರಿಬಾರಿಗೂ ಸಮಾಧಾನ ಹೇಳುತ್ತಿದ್ದರು:

“ಇನ್ನೂ ಸ್ವಲ್ಪ ತಡಿಯಪ್ಪ. ಕಬ್ಬಿಣ ಕಾದಾಗ ಅಲ್ವ ಹೊಡೀಬೇಕು?"

ಒಂದು ದಿನ ಅಪ್ಪು, ಮಾಸ್ತರು ಒಪ್ಪಿಸಿದ ಕೆಲಸದ ಮೇಲೆ ಆ ತಾಲೂಕಿನ ಕೇಂದ್ರವಾದ ಹೊಸದುರ್ಗಕ್ಕೆ ಹೋಗಿ ಬಂದ. ಅಲ್ಲಿ ಒಂದು ಮನೆಯಲ್ಲಿ ಗುಪ್ತವಾಗಿದ್ದ ಪಂಡಿತರು ಆತನಿಗೆ ಕಾಣಲು ಸಿಕ್ಕಿದರು. ಅಪ್ಪು ಅಷ್ಟು ದೂರ ಪ್ರವಾಸ ಮಾಡಿದುದು ಅದೇ ಮೊದಲು. ಒಪ್ಪೊತ್ತಿನ ದಾರಿಯಾದರೂ, ಅದು. ನೂರಾರು ಮೈಲಿಯ ಹಾದಿ ಎನ್ನುನಂತೆ ಅಪ್ಪುವಿಗೆ ಭಾಸವಾಗಿತ್ತು.

ಅಲ್ಲಿ ಆತನನ್ನು ಕಂಡ ಧಾಂಡಿಗ ಹೇಳಿದ:

"ಭೂಮಿ ಗೋಳವಾಗಿದೆ ಅನ್ನೋದಕ್ಕೆ ಇನ್ನೊಂದು ಸಾಕ್ಷ್ಯ ಇವತ್ತು ನನಗೆ ಸಿಕ್ತು.

ನಗೆ ಮಾತಿಗೆ ಇದು ಪೀಠಿಕೆ ಎಂದು ತಿಳಿದರೂ ಅದೇನೆಂದು ಅರ್ಥವಾಗದೆ ಅಪ್ಪು ಕೇಳಿದ:

"ಯಾವುದು ಹೇಳಿ?...."

"ಬೇರೆ ಬೇರೆ ಹಾದಿಯಿಂದ ಹೊರಟರೂ ನಾವು ಆಗಾಗ್ಗೆ ಒಬ್ಬರನ್ನೊಬ್ಬರು ಸಂಧಿಸ್ತಾನೇ ಇದ್ದೇವೆ!"

ಅಪ್ಪು ನಕ್ಕ. ಆಮೇಲೆ ಒಂದು ಮಾತು ಸೇರಿಸಿದ:

"ಇಷ್ಟು ದೂರ ಬಂದಿದ್ದೇನೆ. ಇನ್ನು ಕಯ್ಯೂರಿನವರನ್ನು ಕಪ್ಪೆಗಳೂಂತ ಹೇಳ್ಬೇಡಿ!"

ಹುಬ್ಬುಗಳನ್ನು ಹಣೆಯ ನಡುವೆಗೊಯ್ದು ಸರ್ಕಸಿನ ವಿದೂಷಕನಂತೆ ಕಣ್ಣು ಹೊರಳಿಸುತ್ತ ಧಾಂಡಿಗ "ಅಪ್ಪಣೆ" ಎಂದ.

....ಕಯ್ಯೂರಿಗೆ ಹಿಂತಿರುಗಿ ಮಾಸ್ತರಿಗೆ ಪ್ರವಾಸದ ವರದಿಯನ್ನೊಪ್ಪಿಸುತ್ತ ಅಪ್ಪು ಹೇಳಿದ.

"ಹೊಸದುರ್ಗದಲ್ಲಿ ಬಹಳ ಜನ ಕನ್ನಡ ಮಾತಾಡ್ತಾರೆ.”