ಪುಟ:Chirasmarane-Niranjana.pdf/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೨ ಚಿರಸ್ಮರಣೆ ಅವಕಾಶವನ್ನು ಬಿಟ್ಟುಕೊಡಲಾರದೆ ನಂಬಿಯಾರರು, ಆಗೊಮ್ಮೆ ಈಗೊಮ್ಮೆ, ತಮಗೆ ತಿಳಿದ ಹರಕು ಮುರುಕು ಇಂಗ್ಲಿಷಿನಲ್ಲಿ ಪೋಲೀಸ್ ಅದ್ದಿಕಾರಿಯೊಡನೆ ಮಾತನಾಡುತ್ತಿದ್ದರು. ಅಪ್ಪು ಮತ್ತು ಚಿರುಕಂಡ ಮೊಗಸಾಲೆಯನ್ನು ತಲಪಿ ಪಟೇಲರಿಗೆ ವಂದಿಸಿದರು.ಸ್ವಭಾವತ: ಪುಕ್ಕಲು ಮನುಷ್ಯನಾಗಿದ್ದ ಪಟೇಲರೆಂದರು: "ಕೂತ್ಕೊಳ್ಳಿ."

ಆದರೆ ಕುಳಿತುಕೊಳ್ಳಲು ಆಗ ಯಾವ ಆಸನವೂ ಅಲ್ಲಿ ಇರಲಿಲ್ಲ.ಅದನ್ನು ಗಮನಿಸದೆಯೆ ಪಟೇಲರು ಹಾಗೆ ಹೇಳಿದ್ದರು.ಆ ರೀತಿ ಅವರು ವಿನಯ ತೋರಿ ಮಾತನಾಡಿದುದನ್ನು ಕಂಡ ನಂಬಿಯಾರರ ಮೈ ಉರಿಯಿತು.

ಅವರು ಸಿಗರೇಟನ್ನು ಕಚ್ಚಿದರು.ಹೊಗೆಸೊಪ್ಪು ತುಟಿಗಳಿಗೆ ಅಂಟಿಕೊಂಡಿತು.'ಕೆಲಸ ಆರಂಭಿಸಿ,' ಎನ್ನುವಂತೆ ಘೌಜದಾರರತ್ತ ನೋಡಿದರು.ಆದರೆ ಪ್ರಾಸ್ತಾವಿಕವಾಗಿ ಒಂದು ಮಾತು ಹೇಳಬೇಕಾಯಿತು: "ಹೊಸದುರ್ಗದಿಂದ ಇನ್ಸಪೆಕ್ಟರ್ ಸಾಹೇಬರು ತನಿಖೆಗೆ ಬಂದಿದ್ದಾರೆ. ಇದ್ದದ್ದನ್ನು ಇದ್ದ ಹಾಗೇ ಹೇಳಿ.ನಿಮಗೇನೂ ತೊಂದರೆಯಾಗೋದಿಲ್ಲ."

ಅದು ಅಭ್ಯಾಸಬಲದಿಂದ ಅವರು ಆಡಿದ ಮಾತು.ನಿಂತಿದ್ದ ಅಪ್ಪುವಿಗೆ ತನ್ನ ಕೈಗಳನ್ನೇನು ಮಾಡಬೇಕೋ ತೋರಲಿಲ್ಲ.ಅಪರಾಧಿಯ ಹಾಗೆ ಕೈಕಟ್ಟಿ ನಿಲ್ಲುವುದಂತೂ ಆತನಿಗೆ ಇಷ್ಟವಿರಲಿಲ್ಲ.ಒಂದು ಕೈಯನ್ನು ಆತ ಬೆನ್ನ ಹಿಂದೆ ಇರಿಸಿದ;ಇನ್ನೊಂದನ್ನು ಅಡ್ಡಾದಿಡ್ಡಿಯಾಗಿ ಚಲಿಸಿದ.ಚಿರುಕಂಡನಿಗೂ ಹಾಗೆಯೇ ಆಯಿತು.ಆದರೂ ಆತ ನಿಶ್ಚಲನಾಗಿದ್ದ,ಎಂಥಂಥ ಪ್ರಶ್ನೆಗಳು ಬರಬಹುದೆಂಬುದನ್ನು ಊಹಿಸುವುದರಲ್ಲೇ ಆತನ ಮನಸ್ಸು ನೆಟ್ಟಿತು.
ಮೀಸೆ ಬಿಡದೆ ನುಣ್ಣನೆ ಮುಖಷ್ಕೌರ ಮಾಡಿಕೊಂಡಿದ್ದ ಸುರೂಪಿಯಾಗಿದ್ದ ಘೌಜದಾರರು ಕೇಳಿದರು:"ನಿಮ್ಮ ಮುಖಂಡರು ಯಾರು?"

ಚಿರುಕಂಡನೆ ಮುಂದಾಗಿ ಉತ್ತರವಿತ್ತ: "ನಮ್ಮಲ್ಲಿ ಮುಖಂಡರೂ ಇಲ್ಲ,ಹಿಂಬಾಲಕರೂ ಇಲ್ಲ.ನಾವೆಲ್ಲಾ ರೈತರು." "ಈತ ಚಿರುಕಂಡ"ಎಂದರು ಪಟೇಲರು. "ಓಹೋ!ನೀನೇ ಏನು ಕಾರ್ಯದರ್ಶಿ ಚಿರುಕಂಡ ಅನ್ನೋನು?" ಉಗ್ರವಾಗಿದ್ದ ಧ್ವನಿಯಲ್ಲಿ ಅಪ್ಪುವೆಂದ: "ನಮ್ಮಲ್ಲಿ ಬಹುವಚನದಿಂದ ಸಂಬೋಧಿಸಿ ಮಾತನಾಡೋದು ಪದ್ದತಿ." ಘೌಜದಾರರು ಹುಬ್ಬು ಗಂಟಿಕ್ಕಿ ಅಪ್ಪುವನ್ನು ನೋಡಿದರು.ನಂಬಿಯಾರರು