ಪುಟ:Chirasmarane-Niranjana.pdf/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ೧೫೩ ಅಸಹನೆಯಿಂದ ಆಸನದ ಮೇಲೆಯೇ ಅತ್ತಿತ್ತ ಮಿಸುಕುತ್ತ ಮತ್ತೊಂದು ಸಿಗರೇಟು ಹಚ್ಚಿದರು.ನಂಬೂದಿರಿ ಕಲ್ಲಿನಲ್ಲಿ ಕಡೆದ ವಿಗ್ರಹದ ಹಾಗೆ ನಿರ್ವಿಕಾರವಾಗಿ ಕುಳಿತರು.ಅಪ್ಪುವಿನ ಉದ್ದಟತನದ ಮಾತು ಕೇಳಿದ ಊಳಿಗದ ಕೆಲವರು,ಅದಕ್ಕೆ ಶಿಕ್ಷೆಯಾಗಿ ಈಗಲೆ ಆತನಿಗೆ ಹೊಡೆತ ಬೀಳಬಹುದೆಂದು ಭಾವಿಸಿದರು.ಕೋರ ಹೆಜ್ಜೆ ಇಡುತ್ತ ಸಮೀಪಕ್ಕೆ ಬಂದ. ಮುಗುಳುನಕ್ಕು,'ಹೂಂ'ಕರಸಿ ವ್ಯಂಗ್ಯಧ್ವನಿಯಲ್ಲಿ ಘೌಜದಾರರೆಂದರು: "ತಾವೇನೋ ಹಾಗಾದರೆ ಕಾರ್ಯದರ್ಶಿಯವರು?" "ಹೌದು ನಾನೇ?" "ನಿಮಗೆ ತಲೆಮರೆಸ್ಕೊಂಡು ತಿರುಗಾಡೋ ಕ್ರಾಂತಿಕಾರರ ಪರಿಚಯ ಇಲ್ವೋ?" "ನಮಗೆ ಅದೊಂದೂ ಗೊತ್ತಿಲ್ಲ." "ಪಂಡಿತ ಅಂತ ಒಬ್ಬನ ಹೆಸರು ಕೇಳಿದ್ದೀರೋ?" ಅಪ್ಪುವಿನ ಮುಖ ಕೆಂಪಗಾಯಿತು.ಚಿರುಕಂಡ ಶಾಂತನಾಗಿಯೇ ನುಡಿದ: "ನಮಗೆ ಯಾವ ಪಂಡಿತರ ಪರಿಚಯವೂ ಇಲ್ಲ." "ಹಾಗೇನು?ತಳಿಪರಂಬ ರೈತ ಸಮ್ಮೇಳನಕ್ಕೆ ಯಾರು ನಿಮ್ಮನ್ನು ಕಳಿಸ್ದೋರು?" "ಯಾರೂ ಇಲ್ಲ.ಜಾತ್ರೆಗೆ ಹೋದವರು ನಾವಾಗಿಯೇ ಸಮ್ಮೇಳವನ್ನೂ ನೋಡಿದೆವು."

ಅವರೆಗೂ ಸುಮ್ಮನಿದ್ದ ನಂಬೂದಿರಿ ಬಾಯಿ ತೆರೆದು,"ಜಾತ್ರೆಗೆ ಹೋದರು,

ಮರುಳಾದರು"ಎಂದು ಹೇಳಿ ಖೊಖೋ ಎಂದು ನಕ್ಕರು.ನಂಬೂದಿರಿಯ ನಗು ಕೇಳಿ ಘೌಜದಾರರ ವಿಚಾರ ಸರಣಿ ಕಡಿದುಹೋಯಿತು.ಆದರೂ ಸುಧಾರಿಸಿಕೊಂಡು ಅವರೆಂದರು: "ನಿಮ್ಮ ಸಂಘದ ಉದ್ದೇಶವೇನು?" ಅಪ್ಪು ಉದ್ವೇಗದ ಸ್ವರದಲ್ಲಿ ಕೇಳಿದ: "ಯಾವುದೋ ವಿಚಾರಣೆ ಮಾಡೋ ಹಾಗೆ ಪ್ರಶ್ನೆ ಕೇಳ್ತಿದ್ದೀರಲ್ಲ!" ಘೌಜದಾರರು ಸ್ವರವೇರಿಸಿದರು: "ಹೌದು,ವಿಚಾರಣೆಯೇ!ನಿಮ್ಮ ಮೇಲೆ ದೂರು ಬಂದಿದೆ." ಅಪ್ಪು ಕೆಣಕಿ ನುಡಿದ: "ಹಾಗಾದರೆ ಹಿಡಕಂಡು ಹೋಗಿ;ನ್ಯಾಯಸ್ಥಾನದಲ್ಲಿ ವಿಚಾರಣೆ ನಡೀಲಿ!" "ಯಾಕೆ,ಜೈಲಿಗೆ ಹೋಗೋದಕ್ಕೆ ಆಸೆಯಾಗ್ತಿದೆಯೊ?" ಸಂವಾದದ ರೀತಿ ಬದಲಾಗಬೇಕೆಂದು ಚಿರುಕಂಡನೆಂದ: