ಪುಟ:Chirasmarane-Niranjana.pdf/೨೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ೨೫೭ ಇಲ್ಲಿಂದ. ಇವರು ಪಟ್ಟಣವಾಸಿಗಳು... ಬಡವರ ಸಂಕಟವೇನೆಂದು ಬಲ್ಲವರು.. ಅವರ ನಡುವೆ ಗೂಢಚಾರರೂ ಇರಬವುದು. ಹೂವಿನ ದಂಟಿಗೆ ಅಂಟಿಕೊಂಡೇ ಮುಳ್ಳು....

ಮೊದಲು ನಾಲ್ವರು-ಅಪ್ಪು, ಚಿರಕುಂಡ, ಕುಂಞ್ಂಬು ಮತ್ತು ಅಬೂಬಕರ್. ಬಳಿಕ-ಕುಟ್ಟಿಕೃಷ್ಣ. ಅವನ ಹಿಂದೆ

ಶಿಕ್ಷೆಗೆ ಗುರಿಯಾದ ಮಾಸ್ತರು ಮತ್ತಿತರರು. ಅವರ ಹಿಂದೆಯೇ ಮೋಟಾರನ್ನೇರಿ ಬರಲೆತ್ನಿಸಿದ ಬಂಧಮುಕ್ತರು.

"ನೀವು ಬರಬೇಡಿ! ಬುದ್ದಿ ಇಲ್ಲ ನಿಮಗೆ? ಹಾಕಿ ಬಾಗಿಲು!"
ಉದ್ವೇಗ ತುಂಬಿದ್ದ ಧ್ವನಿಯಲ್ಲಿ ಯಾರೋ ಕೂಗಿದರು:
"ಇಂಕ್ವಿಲಾಬ್-"
ಅದು ಅನಿರೀಕ್ಷಿತವಾಗಿತ್ತು. ಅಂಜುತ್ತ ಉತ್ತರವಿತ್ತುದೊಂದೇ ಸ್ವರ:
"ಜಿಂದಾಬಾದ್!"
ಮತ್ತೆ ಮೊದಲಿನ ಧ್ವನಿಯೇ ಹೆಚ್ಚು ಗಟ್ಟಿಯಾಗಿ ಕೂಗಿತ್ತು:
"ಇಂಕ್ವಿಲಾಬ್-"
ಈಗ ಧೄರ್ಯದಿಂದ... ಉತ್ತರಕೊಟ್ಟ ಸ್ವರಗಳು ನೂರು.
"ಜಿಂದಾಬಾದ್!"

ಹಳ್ಳಿಯವರೂ ಪಟ್ಟಣದವರೂ ವಾಹನದೊಳಗಿದ್ದವರೂ ಹೊರಗಿದ್ದವರೂ ನೂರಾರು ಜನ ಈಗ ಕೂಗಿದರು:

"ದಬ್ಬಾಳಿಕೆಗೆ-"
"ಧಿಕ್ಕಾರ!"
"ಸಾಮ್ರಾಜ್ಯಶಾಹಿ-"
"ನಾಶವಾಗಲಿ!"
"ಕ್ರಾಂತಿಗೆ_"
"ಜಯವಾಗಲಿ!"

ನೆರೆದವರನ್ನು ಚೆದರಿಸಲೆಂದು ಪೋಲೀಸರು ದಂಡವೆತ್ತುತ್ತಿದ್ದಂತೆ ವಾಹನ ಹೊರಟಿತು.

ಕೊನೆಯದಾಗಿ ಹಲವು ಕಂಠಗಳಿಂದ ವಂದನೆ:

"ಕಯ್ಯೂರು ಬಾಂಧವರಿಗೆ ರಕ್ತ ನಮಸ್ಕಾರ!" ಅದಕ್ಕೆ, ಧಾವಿಸುತ್ತಿದ್ದ ವಾಹನದೊಳಗಿಂದ ಹಲವು ಧ್ವನಿಗಳ ಮರುವಂದನೆ: "ಸಂಗಾತಿಗಳೇ ರಕ್ತನಮಸ್ಕಾರ!"