ಪುಟ:Chirasmarane-Niranjana.pdf/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

"ಬೇಡ!ಏನಾದರೂ ಆದರೆ? "

ಅಪ್ಪುವಿಗೆ ರೇಗಿತು. ಆದರೆ ಮರುಕ್ಷಣವೆ, ಚಿರುಕಂಡನ ಮಾತಿನಲ್ಲಿ ಸತ್ಯಾಂಶ ಇದೆ ಎಂಬುದನ್ನು ಮನಗಂಡು, ಆತ ಸುಮ್ಮನಾದ.

ಅಷ್ಟರಲ್ಲೆ ಮಾಸ್ತರು, ಹುಡುಗರ ಯೋಚನೆಗಳಿಗೆಲ್ಲ ಪೂರ್ಣ ವಿರಾಮ ಇತ್ತರು. "ನೋಡಿರೊ-ಎಡಕ್ಕೆ ಈ ಹಾದಿ ಹೋಗ್ತದಲ್ಲ?ಇದರಲ್ಲಿ ಹೊರಟ್ಠೋಗಿ,ಇದು ನೀವು ಬಂದ ದಾರಿಗೇ ಸೇರ್ತದೆ." ಅಪ್ಪು ಅಳುಕುತ್ತ ಕೇಳಿದ:"ನೀವು ಸರ್?" ಮಾಸ್ತರು ಸ್ವರ ತಗ್ಗಿಸಿ ಹೇಳಿದರು: "ನಾನು ಇವರ ಜತೆ ಈಗ ನೀಲೇಶ್ವರಕ್ಕೆ ಹೋಗ್ತೇನೆ. ಬೆಳಿಗ್ಗಿನ ರೈಲಲ್ಲಿ ಚರ್ವತ್ತೂರಿಗೆ ಬಂದು, ಅಲ್ಲಿಂದ ನಡ್ಕೊಂಡು ಬರ್ತೆನೆ. ಹೊತ್ತಾಗ್ತಾ ಬಂತು.ನೀವಿನ್ನು ಹೊರಡೀಪ್ಪ."ಅವರನ್ನು ಬಿಟ್ಟು, ಹೊರಡಲೇಬೇಕಾದುದು ಅನಿವಾರ್ಯವಾದಾಗ ಹುಡುಗರಿಗೆ ದುಃಖವೆನಿಸಿತು.ಪಂಡಿತರು ಹುಡುಗರ ಅಂಗೈಗಳನ್ನು ಹಿಸುಕಿ, ಬೆನ್ನು ತಟ್ಟಿ, ಮುಗುಳುನಕ್ಕರು. ಪ್ರಭು ದೂರದಲ್ಲೆ ನಿಂತು, ತಲೆಬಾಗಿ, ಹುಡುಗರ ವಂದನೆ ಸ್ವೀಕರಿಸಿದ. ಧಾಂಡಿಗ ಗೊಗ್ಗರ ಧ್ವನಿಯಲ್ಲಿ ಹೇಳಿದ: "ನನ್ನನ್ನು ಮರೀಬೇಡ್ರೊ ಮರಿಗಳ್ರಾ,ಒಂದ್ಸಲ ಕಯ್ಯುರಿಗೆ ಬಂದು ನಿಮ್ಮನ್ನೆಲ್ಲ ನೋಡ್ತೇನೆ." ಆಮೇಲೂ ಹುಡುಗರು ಹೋಗದೆ ನಿಂತಾಗ, ಮಾಸ್ತರೆಂದರು: "ಹೋಗೀಪ್ಪಾ.... ಇಲ್ಲಿಗೆ ಬಂದದ್ದು ಯಾರಿಗೂ ಹೇಳ್ಬೇಡಿ." ಅದು ಅನಗತ್ಯ ಎಚ್ಚರಕೆ ಎಂದು ಗೊತ್ತಿದ್ದರೂ, ಹುಡುಗರು ಪ್ರತಿಭಟಿಸಲಿಲ್ಲ. 'ಹೇಳೋದಿಲ್ಲ' ಎನ್ನುವಂತೆ ತಲೆ ಅಲ್ಲಾಡಿಸಿದರು. ತಿರುತಿರುಗಿ ನೋಡುತ್ತ ಹುಡುಗರು ಹೊರಟಾಗ ಮಾಸ್ತರು ನುಡಿದರು: "ಹೊಳೆ ದಾಟುವಾಗ ಹುಷಾರಿ.ಒಡಕು ದೋಣಿ ಬೇರೆ.ನೀರು ಸರಿಯಾಗಿ ಎತ್ತುತ್ತ ಇರಪ್ಪ ಚಿರುಕಂಡ. ಅಪ್ಪು,ಕತ್ತಲಾಗೋಕ್ಮುಂಚೆ ಆಚೆ ದಡ ಸೇರ್ಬೆಕು ಕಣೋ." ಹುಡುಗರು ನಡಿಗೆಯನ್ನು ತೀವ್ರಗೊಳಿಸುತ್ತ "ಹೂಂ" ಅಂದರು.