ಪುಟ:Chirasmarane-Niranjana.pdf/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಚಿರಸ್ಮರಣೆ ತನ್ನೊಳಗಿದ್ದ ಭೀತಿಯನ್ನು ವ್ಯಕ್ತಪಡಿಸುತ್ತ ತಾಯಿ ಅಂದಳು: "ಇವತ್ತು ಏನಾಗುತ್ತೊ?ಇಷ್ಟು ಹೊತ್ತಿನವರೆಗೂ ಅವರನ್ನು ಯಾಕೆ ಅಲ್ಲಿ ಕೂಡಿಸಿಕೊಂಡರೊ?" ಚಿರುಕಂಡನಿಗೆ ಉತ್ತರ ತಿಳಿದಿರಲಿಲ್ಲ. ಆದರೂ ಆತನ ಮನಸ್ಸು ಜಮೀನುದಾರರ ಮನೆಯ ಕಡೆ ಸುಳಿಯಿತು. ನಾಲ್ಕು ವರುಷಗಳಿಗೆ ಹಿಂದೆಯೊಮ್ಮೆ ಅದೇ ಜಮೀನ್ದಾರರ ಚಾವಡಿಯ ಎದುರು ತಾನು ಕಂಡಿದ್ದ ದೃಶ್ಯ ಚಿರುಕಂಡನ ನೆನಪಿಗೆ ಬಂತು. ...ಸಂಜೆಯ ಹೊತ್ತು. ಜನರ ಗುಂಪು ಜಮೀನ್ದಾರರ ಮನೆಯ ಮುಂದೆ ನೆರೆಯುತ್ತಿದ್ದುದನ್ನು ಕಂಡು, ಗೊಂಬೆಯಾಟದವರೊ ಡೊಂಬರೊ ಇರಬಹುದೆಂದು, ತಮಾಷೆ ನೋಡಲು ಚಿರುಕಂಡನೂ ಅಲ್ಲಿಗೆ ಹೋಗಿದ್ದ. ಆದರೆ ಅಲ್ಲಿ ಅಂತಹ ಯಾವ ಆಟವೂ ಇರಲಿಲ್ಲ. ಬದಲು, ಮಧ್ಯವಯಸ್ಸಿನ ರೈತನೊಬ್ಬ ಚಾವಡಿಯ ಕುರ್ಚಿಯ ಮೇಲೆ ಕುಳಿತಿದ್ದ, ವಯಸ್ಸಿನಲ್ಲಿ ತನಗಿಂತಲೂ ಚಿಕ್ಕವರಾದ ಜಮೀನ್ದಾರರೆದುರು, ಹೊರಗೆ ಅಂಗಳದಲ್ಲಿ ಮಣ್ಣಿನ ಮೇಲೆ ಉದ್ದಂಡ ಮೈಚಾಚಿ ಕೈಜೋಡಿಸಿ ನಮಸ್ಕಾರ ಮಾಡಿದ್ದ. ಚಿರುಕಂಡ ಅಲ್ಲಿಗೆ ಹೋಗಿ ನೋಡಿದಾಗ ಮೌನ ನೆಲೆಸಿತು. ಮುಂದೆ ಜಮೀನ್ದಾರರು ಏನು ಹೇಳುವರೋ ಎಂದು ಆತುರಗೊಂಡು ಕಿವಿ ನಿಗುರಿಸಿ ಎಲ್ಲರೂ ನಿಂತಿದ್ದರು. ಜಮೀನ್ದಾರರು ಏನೂ ಹೇಳಲೇ ಇಲ್ಲ, ಅವರು ಒಂದೇ ಸಮನೆ ಸಿಗರೇಟು ಸೇದುತ್ತ ಹೊಗೆ ಬಿಟ್ಟರು. ಅವರ ಎಡಬಲಗಳಲ್ಲಿ ಕೈಕಟ್ಟಿ ನಿಂತಿದ್ದ ಆಳುಗಳು ಇದ್ದರು. ಮೌನವನ್ನು ಮುರಿದು ಜಮಿನ್ದಾರರ ಸ್ವರ ಗುಡುಗಿತು: "ಏನು ಹೇಳು!" ರೈತನಿಂದ ಉತ್ತರ ಬರಲಿಲ್ಲ. "ಆಟ ಆಡ್ತಿದ್ದಾನೆ ಬೋಳೀಮಗ. ಬಿಗಿಯಿರೊ ಇನ್ನೆರಡು." ಪಕ್ಕದಲ್ಲೇ ಬಾರುಕೋಲು ಹಿಡಿದು ನಿಂತಿದ್ದ ಕಟ್ಟಾಳುವೊಬ್ಬ ಮುಂದೆ ಬಂದು, ಮಲಗಿದ್ದವನ ಬೆನ್ನಿನ ಮೇಲೆ ಬಾರಿಸಿದ. ಆದರೂ ಆ ರೈತ ಏಳಲಿಲ್ಲ.ಭೂಮಿತಾಯಿಯ ಮಡಿಲಲ್ಲಿ ಮುಖವಿಟ್ಟವನು ಮೇಲಕ್ಕೆ ತಲೆ ಎತ್ತಲೇ ಇಲ್ಲ. ಮತ್ತೂ ಸ್ವಲ್ಪ ಹೊತ್ತಾದ ಮೇಲೆ ಜಮೀನ್ದಾರರೆದ್ದು, ರೈತನನ್ನು ಶಪಿಸುತ್ತ ಆತನ ಸುತ್ತುಮುತ್ತು ನೆಲವನ್ನು ತುಳಿಯುತ್ತ ಬುಸುಗುಟ್ಟುತ್ತ ನಡೆದಾಡಿದರು.