ಪುಟ:Chirasmarane-Niranjana.pdf/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ೭೧ ಈಗ ಆಕಾಶ ನೋಡುತ್ತ ಈ ಘಟನೆಯನ್ನು ಸ್ಮರಿಸುತ್ತ ಚಿರುಕಂಡನ ಮೈ ರೋಮ ಮುಳ್ಳಾಯಿತು. ತನ್ನ ತಂದೆಗೆ ಜಮೀನ್ದಾರರ ಮನೆಯಲ್ಲಿ ಏನೂ ಆಗಿರಲಾರದಲ್ಲವೆ?...ಆ ದಿನ ಹಿಂಸೆಗೊಳಗಾಗಿದ್ದ ಬಡ ರೈತನಿಗೆ ಏನಾಯಿತು? ಚಿರುಕಂಡನಿಗೆ ಸರಿಯಾಗಿ ನೆನಪಿರಲಿಲ್ಲ. ಆದರೆ ಆ ರೈತ ಮತ್ತೆ ಎಲ್ಲೂ ಕಾಣಲು ದೊರೆತಿರಲಿಲ್ಲ. ಆ ವರ್ಷವೇ ಊರು ಬಿಟ್ಟು ಹೋದಹಾಗಿತ್ತು. ಈಗ ತನ್ನ ತಂದೆ-- "ಚಿರೂ, ನಿನ್ನಪ್ಪ ಬರ್ತಿದ್ದಾರೆ, ಏಳು !" ತಾಯಿ ಮಾತು ಮಗನ ಯೋಚನೆಗಳಿಗೆ ತಡೆಹಾಕಿತು. ಚಿರುಕಂಡ ಎದ್ದು ಕುಳಿತು, ಕತ್ತಲಲ್ಲಿ ದೂರಕ್ಕೆ ನೋಡಿದ. ಚಂದ್ರಬಿಂಬ ಮೆಲ್ಲನೆ ಉದಿಸುತ್ತಿತ್ತು. ಅದರ ಈಚೆಗೆ ಸಮೀಪದಲ್ಲೆ ಒಣಗಿದ ತಾಳೇಗರಿಯನ್ನು ಹಿಡಿಮಾಡಿ ಕಟ್ಟಿ ಉದಿಸಿದ ಬೆಳಕು, ಅದನ್ನು ಬೀಸಿಬೀಸಿ ಹಾದಿ ನೋಡುತ್ತ ಬರುತ್ತಿದ್ದ ವ್ಯಕ್ತಿ... ತಾಯಿ ಒಳಹೋಗಿ, ಮಣ್ಣಿನ ಹಣತೆಗಿಷ್ಟು ಕೊಬ್ಬರಿ ಎಣ್ಣೆ ಸುರಿದು, ಅದರಲ್ಲೇ ಇದ್ದ ಅರಿವೆಯ ಬತ್ತಿಯ ಮುಖವನ್ನು ಮೇಲಕ್ಕೆಳೆದು, ಅಡುಗೆ ಒಲೆಯಿಂದ ಬೆಳಕು ಅಂಟಿಸಿಕೊಂಡು ಬಂದಳು. ಅಂಗಳ ಸೇರಿದ ತಂದೆ, ಕೈಯಲ್ಲಿದ್ದ ಬೆಳಕು ಆರಿಸಿದ. ಅಲ್ಲೆ ಬಾಳೆ ಗಿಡಗಳ ಬುಡದಲ್ಲಿ ಮಣ್ಣಿನ ಕೊಡದಲ್ಲಿದ್ದ ನೀರಿನಿಂದ ಕೈಕಾಲು ಮುಖ ಹನಿಸಿಕೊಂಡ. ಒಳ ಬಂದು, ನಡುವಿನಲ್ಲಿದ್ದ ಅಂಗವಸ್ತ್ರವನ್ನು ಬಿಚ್ಚಿ ನೀರೊರೆಸಿದ. ಆತ ಉರಿಯುತ್ತಿದ್ದ ಹಣತೆಯನ್ನು ನೋಡಿದ.'ಸೀಮೆಎಣ್ಣೆ ಇಲ್ವ ಮನೇಲಿ?' ಎಂದು ಕೇಳಲಿಲ್ಲ. ಈ ದಿನ ಆತ ನದಿಯಲ್ಲಿ ಸ್ನಾನ ಮಾಡಿರಲಿಲ್ಲವೆಂಬುದು ಚಿರುಕಂಡನ ತಾಯಿಗೆ ಗೊತ್ತಿತ್ತು. ಆದರೆ ಕೈಕಾಲು ತೊಳೆದೇ ಒಳಬಂದುದನ್ನು ಕಂಡು 'ಈಗ ಸ್ನಾನ ಮಾಡ್ತಿರಾ?' ಎಂದು ಅವಳು ಕೇಳಲಿಲ್ಲ. ಜಮಿನ್ದರರ ಮನೆಯಲ್ಲಿ ಏನಾಯಿತೆಂಬುದನ್ನು ತಿಳಿಯಲು ಆಕೆ ಕುತೂಹಲಿಯಾಗಿದ್ದಳು. ಚಿರುಕಂಡ ಕೂಡ. ಆದರೆ ಗಂಡನ ಮುಖದ ಮೇಲಿದ್ದ ಸಂಕಟವನ್ನು ಕಂಡು ತಾಯಿ ನೇರವಾಗಿ ಏನನ್ನೂ ಕೇಳಲಿಲ್ಲ. "ತುಂಬಾ ಹೊತ್ತಾಯ್ತು, ಅಲ್ವ?" ಎಂದು ಆಕೆ ಊಟಕ್ಕೆ ತಟ್ಟೆಗಳನ್ನು ಇಟ್ಟಳು. "ಎಲ್ಲಾ ಮುಗಿಸಬೇಕಾದರೆ ಇಷ್ಟು ತಡವಾಯ್ತು ನೋಡು" ಎಂದು ಉತ್ತರವಿತ್ತು, ತಂದೆ ಊಟ್ಟಕ್ಕೆ ಕುಳಿತು. ದುಃಖ ತುಂಬಿದ ದೃಷ್ಟಿಯಿಂದ ತನ್ನ ಬಳಿಯಲ್ಲಿ ಕುಳಿತಿದ್ದ ಮಗನನ್ನೊಮ್ಮೆ ನೋಡಿದ.